ಮೂಡುಬಿದಿರೆ: ಜಗತ್ತಿನ ಮೊದಲ ನಟ ಶಿವ, ಜಗತ್ತನ್ನು ಕಾಪಾಡಲು ವಿಷವನ್ನೇ ಕುಡಿದ ಶಿವನೇ ಎಲ್ಲಾ ಕಲಾವಿದರ ಆರಾಧ್ಯ ದೈವ. ಸತತ ಪ್ರಯತ್ನದಿಂದ ಕೌಶಲ್ಯ ಬರುತ್ತದೆ. ಕಲೆ ಕೌಶಲ್ಯವನ್ನು ಮೀರಿದ್ದು. ಈ ನಿಟ್ಟಿನಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆ ಧನಾತ್ಮಕ ಚಿಂತನೆ ಹೊಂದಿದೆ. ಈ ಚಿಂತನೆಯಡಿಯಲ್ಲಿ ಎಕ್ಸಲೆಂಟ್ ಪ್ರತಿಭಾವಂತ ಗುರುಗಳನ್ನು ಹೊಂದಿದೆ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ತಂತ್ರಜ್ಞಾನಕ್ಕೂ ಮೀರಿದ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಕಲಾ ಆರಾಧಕರಾಗಿ ಕಲೆಯನ್ನು ಪ್ರೀತಿಸಿದಾಗ ಮಾನಸಿಕ ನೆಮ್ಮದಿಯ ಜೊತೆಗೆ ಸಾಧಕರಾಗಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಈ ಎಕ್ಸಲೆಂಟ್ ವಿದ್ಯಾಸಂಸ್ಥೆ ಅತ್ಯತ್ತಮ ಪ್ರೋತ್ಸಾಹ ನೀಡುತ್ತಿದ್ದು ಇದನ್ನು ಸದ್ಬಳಸಿಕೊಂಡು ಉತ್ತಮ ಕಲಾವಿದರಾಗಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಅಂತರಾಷ್ಟ್ರೀಯ ಖ್ಯಾತಿ ಪಡೆದ ಕಾಂತಾರದ ಕಮಲಕ್ಕ ಖ್ಯಾತಿಯ ಮಾನಸಿ ಸುಧೀರ್ ಹೇಳಿದರು.
ಅವರು ಇಂದು ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಾಂಸ್ಕçತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಕಲಾ ಚಟುವಟಿಕೆಗಳನ್ನು ಪ್ರೀತಿಯಿಂದ ಆಸ್ವಾದಿಸಿ ವಿದ್ಯಾರ್ಥಿಗಳನ್ನು ಕಲೆಯಲ್ಲಿ ಮಾಸ್ಟರ್ಸ್ ಮಾಡುವುದು ನಮ್ಮ ಕನಸಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಕಲೆ ಮನುಷ್ಯನನ್ನು ಸಂತೋಷವಾಗಿಡಿಸುತ್ತದೆ. ಪ್ರತಿದಿನ ತಮ್ಮ ಕಲೆಯ ಮೂಲಕ ಸಂತೋಷವನ್ನು ಉಣಬಡಿಸುತ್ತಿರುವ ನಟಿ ಮಾನಸಿ ಸುಧೀರ್ ಇವರಿಗೆ “ಅಭಿನಯ ಶಂಕರಿ” ಎಂಬ ಬಿರುದು ನೀಡಿ ಗೌರವಿಸುವುದು ನಮಗೆ ಹೆಮ್ಮೆಯೆನಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಪ್ರಪಂಚದ ಮೂಲೆ ಮೂಲೆಗಳಲ್ಲಿ ಸಾಧನೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ವಿದ್ಯಾರ್ಥಿಗಳು ತಮ್ಮ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಬದಲಿಸಿಕೊಂಡು ಯಶಸ್ವಿನತ್ತ ಹೆಜ್ಜೆ ಇಡಬೇಕು ಎಂದರು.
ಇದೇ ಸಂದರ್ಭದಲ್ಲಿ ನಟಿ ಮಾನಸಿ ಸುಧೀರ್ ಅವರನ್ನುಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್, ಸಹ ಮುಖ್ಯೋಪಾಧ್ಯಾಯ ಜಯಶೀಲ, ಸೆಂಟ್ರಲ್ ಶಾಲೆಯ ಉಪ ಪ್ರಾಂಶುಪಾಲೆ ವಿಮಲಾ ಹಾಗೂ ಎಲ್ಲಾ ಚಟುವಟಿಕೆಯ ಶಿಕ್ಷಕರು ಉಪಸ್ಥಿತರಿದ್ದರು.
ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಮೌಲ್ಯ ಸ್ವಾಗತಿಸಿ, ಶ್ಯಾಮಿಲಿ ಹೆಗ್ಡೆ ವಂದಿಸಿದರು. ವಿದ್ಯಾರ್ಥಿ ಸಂಜಿತ್ ನಿರೂಪಿಸಿದರು.