Share this news

ಮೂಡಬಿದಿರೆ: ಶಿಕ್ಷಣ ಮತ್ತು ಆರೋಗ್ಯ ಸ್ವಸ್ಥ ಸಮಾಜದ ಅನಿವರ‍್ಯತೆಗಳಾಗಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಇವೆರಡನ್ನು ಪಡೆದಾಗ ಮಾತ್ರ ಬಲಿಷ್ಠ ಸಮಾಜದ ನಿರ್ಮಾಣವಾಗಲು ಸಾಧ್ಯ. ಪಠ್ಯಗಳ ಜೊತೆಗೆ ಜೀವನ ಮೌಲ್ಯಗಳನ್ನು ತಿಳಿಹೇಳುವ ಶಿಕ್ಷಣದಿಂದ ಸುಶಿಕ್ಷಿತ, ಸಂಸ್ಕಾರಯುತ ಸಮಾಜ ನಿರ್ಮಾಣವಾಗಿ “ಕಟ್ಟುವೆವು ನಾವು ರಸದ ಬೀಡನು” ಎಂಬ ಅಡಿಗರ ಸದಭಿಮಾನದ ಸ್ವಗತಕ್ಕೆ ಅರ್ಥಪೂರ್ಣತೆ ಕೊಡಲು ಸಾಧ್ಯ ಎಂದು ವಿಧಾನ ಪರಿಷತ್ ಶಾಸಕರಾದ ಭೋಜೇಗೌಡ ತಿಳಿಸಿದರು.

ಅವರು ಮೂಡಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ದಶಮ ಸಂಭ್ರಮದ ಸ್ಮರಣಸಂಚಿಕೆ “ಮೌಲ್ಯ” ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣ ಎಂದರೆ ಪಾತ್ರವನ್ನು ತುಂಬಿದ ಹಾಗಲ್ಲ. ದೀಪವನ್ನು ಹಚ್ಚಿ ಬೆಳಗಿದಂತೆ ಯಶಸ್ವಿ ನಾಯಕತ್ವ ಅನುಭವೀ ಉಪನ್ಯಾಸಕವೃಂದ, ಸುಸಜ್ಜಿತ ಕಟ್ಟಡ, ವಾಚಾನಾಲಯ, ಕ್ರೀಡಾಂಗಣ ಸಂಸ್ಕಾರ ಸಾರುವ ಆಚರಣೆಗಳು ವಿದ್ಯಾರ್ಥಿಗಳ ಸೃಜನಶೀಲತೆ ಅರಳಿಸುವ ಕರ‍್ಯಾಗಾರಗಳು ಒಂದು ಯಶಸ್ವೀ ವಿದ್ಯಾಸಂಸ್ಥೆಯ ಲಕ್ಷಣಗಳು. ಎಕ್ಸಲೆಂಟ್ ವಿದ್ಯಾಸಂಸ್ಥೆ ಅವೆಲ್ಲದರಲ್ಲಿಯೂ ಪೂರ್ಣತೆಯನ್ನು ಹೊಂದಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ, ವಿದ್ಯಾರ್ಥಿಗಳ ವಾಚನ ಮತ್ತು ಗ್ರಹಿಕಾ ಕೌಶಲಕ್ಕೆ ಒತ್ತು ನೀಡುವ ಎಲ್ಲ ಕರ‍್ಯಯೋಜನೆಗಳಿಗೆ ನಮ್ಮ ಸಂಸ್ಥೆಯಲ್ಲಿ ಮಹಾಲಿಂಗನ ಸೌಖ್ಯವಿದೆ. ಯೋಜನೆಗಳ ಹಿಂದೆ ಯೋಚನೆಗಳು ವಿದ್ಯಾರ್ಥಿಗಳಲ್ಲಿ ಬೆಳೆಸುವುದಕ್ಕಾಗಿ ಎಕ್ಸಲೆಂಟ್ ಸದಾ ಸರ್ವದಾ ಸಿದ್ಧವಿದೆ ಎಂದರು. ವೇದಿಕೆಯಲ್ಲಿ ಸಂಸ್ಥೆಯ ಕರ‍್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಆಡಳಿತ ನಿರ್ದೇಶಕರಾದ ಡಾ| ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮರ್ ಶೆಟ್ಟಿ,ಪ್ರೌಢಶಾಲಾ ಮುಖ್ಯೋಪಾದ್ಯಾಯರಾದ ಶಿವಪ್ರಸಾದ್ ಭಟ್. ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕ ಡಾ| ವಾದಿರಾಜ್ ಕಲ್ಲೂರಾಯ ಕರ‍್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *