ಮೂಡಬಿದಿರೆ:ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮೂಡಬಿದಿರೆಯ ಕಲ್ಲಬೆಟ್ಟು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಮಹಾವೀರ ಕಾಲೇಜು ಬಳಿಯ ನಿವಾಸಿ ಪ್ರದೀಪ್ ಶೆಟ್ಟಿ (38) ಅಪಘಾತದಲ್ಲಿ ಮೃತಪಟ್ಟ ಯುವಕ.ಪ್ರದೀಪ್ ತನ್ನ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಬೈಕ್ ನಲ್ಲಿ ಮೂಡುಬಿದಿರೆಯಿಂದ ಗಂಟಾಲ್ ಕಟ್ಟೆಗೆ ಬರುತ್ತಿದ್ದ ಸಂದರ್ಭದಲ್ಲಿ ಬೆಳ್ತಂಗಡಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಬರುತ್ತಿದ್ದ ಕಾರು ಕಲ್ಲಬೆಟ್ಟು ಬಳಿ ಢಿಕ್ಕಿ ಹೊಡೆದಿದೆ. ಆಗ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟ ಪ್ರದೀಪ್ ಅವರ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಆಸು ನೀಗಿದ್ದಾರೆ.
ಪ್ರದೀಪ್ ಕಳೆದ ಮೂರು ದಿನಗಳ ಹಿಂದೆ ವಿದೇಶದಿಂದ ಊರಿಗೆ ಬಂದಿದ್ದು, ಇಂದು ತನ್ನ 39 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಸಿದ್ದತೆಯಲ್ಲಿದ್ದರು, ಆದರೆ ವಿಧಿಯಾಟವೇ ಬೇರೆಯಾಗಿತ್ತು, ಹುಟ್ಟು ಹಬ್ಬದ ಮುನ್ನಾ ದಿನವೇ ವಿಧಿಯ ಕ್ರೂರಲೀಲೆಗೆ ಪ್ರದೀಪ್ ಬಲಿಯಾಗಿದ್ದಾರೆ. ಪ್ರದೀಪ್ ಸಾವಿನಿಂದ ಅವರ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.