Share this news

ಮೂಡಬಿದಿರೆ; ಕಳೆದ ವಾರವಷ್ಟೇ ಮೂಡಬಿದಿರೆ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ ಖಾಸಗಿ ಬಸ್ಸು ಡಿಕ್ಕಿಯಾಗಿ ದಾರುಣವಾಗಿ ಮೃತಪಟ್ಟ ಘಟನೆ ಖಂಡಿಸಿ ಶನಿವಾರ ಮೂಡಬಿದಿರೆ ವ್ಯಾಪ್ತಿಯ ಸಾವಿರಾರು ವಿದ್ಯಾರ್ಥಿಗಳು ಮೂಡಬಿದಿರೆ ಬಸ್ಸು ನಿಲ್ದಾಣದಲ್ಲಿ ಅಪಘಾತವೆಸಗಿದ ರೇಶ್ಮಾ ಬಸ್ಸು ಮಾಲಕರ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇದೇವೇಳೆ ವಿದ್ಯಾರ್ಥಿ ಮುಖಂಡರು ಅಪಘಾತಕ್ಕೆ ಕಾರಣವಾದ ಬಸ್ ಮಾಲಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕೆಂದು ಬಿಗಿಪಟ್ಟು ಹೀಡಿದರು.


ಅಮಾಯಕ ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ ಸಾವಿಗೆ ನ್ಯಾಯ ಒದಗಿಸಿದಿದ್ದರೆ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಅಲ್ಲದೇ ಬಸ್ ಸಂಚಾರಕ್ಕೆ ತಡೆಯೊಡ್ಡುವುದಾಗಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ,ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದರು. ಆದರೆ ಬಸ್ ಮಾಲಕ ಸ್ಥಳಕ್ಕೆ ಬರಲೇಬೇಕೆಂದು ಪಟ್ಟುಹಿಡಿದಾಗ ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಮಾಲಕ ಇಲ್ಲಿಗೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ದಯವಿಟ್ಟು ಬಸ್ ತಡೆದು ಪ್ರತಿಭಟನೆ ಮಾಡಬೇಡಿ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಪ್ರತಿಭಟನಾ ಸಭೆಯಲ್ಲಿ ಮೃತ ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ ಪೋಷಕರು ಪಾಲ್ಗೊಂಡು ಮೃತಪಟ್ಟ ನನ್ನ ಮಗನನ್ನು ಬಸ್ ಮಾಲಕನಿಗೆ ತಂದುಕೊಡಲು ಸಾಧ್ಯವೇ ಎಂದು ಭಾವುಕರಾಗಿ ನುಡಿದರು. ಕಾರ್ತಿಕ್ ಸಾವಿನಿಂದ ಅವನ ಪೋಷಕರು ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಆಗಿರುವ ನೋವಿನಂತೆ ನನಗೂ ನೋವಾಗಿದೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ,ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಈ ಕುರಿತು ಸೋಮವಾರ ಬಸ್ ಮಾಲಕರ ಸಂಘ, ಪೊಲೀಸ್ ಇಲಾಖೆ, ಕಾಲೇಜು ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಮುಖಂಡರ ಜತೆ ಸಭೆ ಕರೆಯಲಾಗಿದೆ.ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಸಭೆ ಕರೆಯುವುದಾಗಿ ಭರವಸೆ ನೀಡಿದ ಬಳಿಕ ಸಾವಿರಾರು ವಿದ್ಯಾರ್ಥಿಗಳು ಮಧ್ಯಾಹ್ನದವರೆಗೂ ಶಾಂತಿಯುತ ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *