ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದ ವಾಣಿಜ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಸಂಘವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಮೂಡುಬಿದಿರೆಯ ಪ್ರಭಾತ್ ಸಿಲ್ಕ್ಕ್ಸ್ ನ ಮುಖ್ಯಸ್ಥರಾದ ಪೂರ್ಣಚಂದ್ರ ಜೈನ್, ತಾಳ್ಮೆ, ಸಹನೆ, ಆತ್ಮವಿಶ್ವಾಸಗಳೇ ಯಶಸ್ಸಿನ ಮೈಲಿಗಲ್ಲು. ಪರಿವರ್ತನೆಗೊಳ್ಳುತ್ತಿರುವ ಪ್ರಪಂಚದಲ್ಲಿ ವ್ಯವಹಾರದ ವಿಚಾರಗಳನ್ನು ನಿರಂತರ ತಿಳಿದುಕೊಳ್ಳುತ್ತಿರಬೇಕು. ಕಠಿಣ ಶ್ರಮ, ವಿಷಯದ ಬಗ್ಗೆ ಬದ್ಧತೆ, ತೊಡಗಿಸಿಕೊಳ್ಳುವಲ್ಲಿನ ಶ್ರದ್ಧೆ ನಿಮ್ಮನ್ನು ಎತ್ತರಕ್ಕೆ ಏರಿಸಬಲ್ಲದು ಎಂದರು.

ಇನ್ನೋರ್ವ ಅತಿಥಿ ಕರ್ತವ್ಯ ಜೈನ್ ಮಾತನಾಡಿ, ಯಶಸ್ಸಿಗೆ ಯಾವುದೇ ಸುಲಭದ ದಾರಿ ಇಲ್ಲ. ಒಂದು ಉತ್ತಮ ಸಂಸ್ಥೆಯನ್ನು ಸೇರಬೇಕೆಂದರೆ ಉತ್ತಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಬೇಕು. ಯಶಸ್ಸು ಪರಿಶ್ರಮವನ್ನು ಬೇಡುತ್ತದೆ. ಸ್ಪರ್ದಾತ್ಮಕ ಜಗತ್ತಿನನ್ನು ಎದುರಿಸಲು ತನಗೆ ಎಕ್ಸಲೆಂಟ್ ವಿದ್ಯಾಸಂಸ್ಥೆ ಭದ್ರ ಬುನಾದಿ ಹಾಕಿ ಕೊಟ್ಟಿದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ0ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ವಾಣಿಜ್ಯ ವಿಭಾಗ ವರ್ಷದಿಂದ ವರ್ಷಕ್ಕೆ ನೂತನ ಯೋಜನೆಗಳೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣವನ್ನು ಕಲ್ಪಿಸಿಕೊಡುತ್ತಿದೆ. ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರ ಸಮರ್ಪಕ ನಾಯಕತ್ವದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆಗೈಯುತ್ತಾ ಬಂದಿರುತ್ತದೆ. ಕಳೆದ ವರ್ಷದ ಅತ್ಯುತ್ತಮ ಫಲಿತಾ0ಶ ಇದಕ್ಕೆ ಉತ್ತಮ ನಿದರ್ಶನ ಎಂದು ಹೇಳಿದರು. ವಿಭಾಗದಿಂದ ನಡೆಯಲ್ಪಡುವ ಎಲ್ಲಾ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಪ್ರಯೋಜನ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ, ಜಗತ್ತು ಶರವೇಗದಿಂದ ಬದಲಾಗುತ್ತಿದೆ. ಮೂರು ದಶಕಗಳ ಹಿ0ದೆ ಒಂದು ಸಂಸ್ಥೆ ಪ್ರಗತಿಯನ್ನು ಹೊಂದಬೇಕಾದರೆ ಸಾಕಷ್ಟು ವರ್ಷಗಳ ಶ್ರಮ ಅಡಗಿರುತ್ತಿತ್ತು. ಆದರೆ ಇಂದು ಅದನ್ನು ನಾಲ್ಕೈದು ವರ್ಷಗಳಲ್ಲಿ ಸಾಧಿಸಬಹುದು. ಇದು ಮುಂದುವರೆದಂತೆ ಕೇವಲ ಒಂದೇ ವರ್ಷದಲ್ಲಿ ಬದಲಾವಣೆಗಳನ್ನು ಕಾಣಲು ಸಾಧ್ಯವಾಗುತ್ತದೆ. ತಾಂತ್ರಿಕ ಪ್ರಗತಿಯಿಂದ ತ್ವರಿತಗತಿಯಲ್ಲಿ ಸಾಗುತ್ತಿರುವ ಜಗತ್ತಿನ ವೇಗಕ್ಕೆ ಸರಿಯಾಗಿ ನಾವು ಹೊಂದಿಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಲು ಸಾಧ್ಯವಾಗುತ್ತದೆ. ಮೌನ ಸಮಸ್ಯೆಯನ್ನು ತಡೆಯಬಲ್ಲದು. ಮಂದಹಾಸ ಸಮಸ್ಯೆಗೆ ಪರಿಹಾರ ಒದಗಿಸಬಲ್ಲದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಭಿತ್ತಿ ಪತ್ರಿಕೆಯನ್ನು ಕರ್ತವ್ಯ ಜೈನ್ ಅನಾವರಣಗೊಳಿಸಿದರು. ಪೂರ್ಣಚಂದ್ರ ಜೈನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ಶೆಟ್ಟಿ, ಸಂಘದ ಸಂಯೋಜಕಿ ಸಂಧ್ಯಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ವಾಗತ ನೃತ್ಯದ ಮೂಲಕ ಆರಂಭಿಸಲಾಯಿತು. ಸ0ಘದ ಅಧ್ಯಕ್ಷೆ ಸ್ಪೂರ್ತಿ ಪಾಟೀಲ್ ಸ್ವಾಗತಿಸಿದರು. ಕುಮಾರಿ ರೋಚನಾ ಮಲ್ಯ ಮತ್ತು ಕುಮಾರಿ ರಕ್ಷಾ ಎ ಪಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಸಂಸ್ಕೃತಿ ಪೂಜಾರಿ ವಂದಿಸಿದರು. ಕುಮಾರಿ ಮೋಕ್ಷಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

