ಮೂಡುಬಿದಿರೆ: ನಮ್ಮ ಸನಾತನ ಸಂಸ್ಕೃತಿಯಲ್ಲಿ ಗುರುವನ್ನು ಹುಡುಕಿಕೊಂಡು ಹೋಗಿ ವಿದ್ಯೆ ಕಲಿಯುತ್ತಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಗುರುವಿಗೆ ಮಹತ್ತರ ಸ್ಥಾನವಿದೆ. ಗುರುವಿನ ನೆನಪುಗಳಿಲ್ಲದೆ ಬದುಕಿನ ನಡೆಗೆ ಅರ್ಥವೇ ಇರುವುದಿಲ್ಲ. ಒಬ್ಬ ಶ್ರೇಷ್ಟ ಗುರು ಒಂದು ಬಲಿಷ್ಠ ಸಮಾಜ ನಿರ್ಮಾಣವನ್ನು ಮಾಡಬಲ್ಲ. ಭಗವಂತನ ಸೃಷ್ಟಿಗೆ ಅಪೂರ್ವವಾದ ಆಕಾರವನ್ನು ಕೊಡುವವ ಶಿಕ್ಷಕ. ಆದ್ದರಿಂದ ಅಧ್ಯಾಪನವೆಂದರೆ ಪವಾಡವಲ್ಲ. ಅದು ಶ್ರದ್ಧೆ, ಕ್ರಮ, ಅಭ್ಯಾಸ ಹುಡುಕಾಟದ ಪ್ರತಿಫಲ. ತಪ್ಪು ಒಪ್ಪುಗಳ ಹಾದಿ ಹಿಡಿದು ಹೊಸದೊಂದರ ಹುಡುಕಾಟದಲ್ಲಿ ತೊಡಗುವ ಅಧ್ಯಾಪಕನ ಶ್ರಮ ಮಹತ್ತರವಾದುದು. ಅಧ್ಯಾಪನದಲ್ಲಿ ಸಿಗುವ ಆತ್ಮತೃಪ್ತಿ ಅನುಪಮವಾದುದು. ಒಬ್ಬ ಶಿಕ್ಷಕನ ಒಂದು ಅವಧಿಯ ಪಾಠ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರವಾಗಿಡುತ್ತದೆ. ಆ ನಿಟ್ಟಿನಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಾಧನೆ ಶ್ಲಾಘನೀಯವಾದುದು. ಗೂಗಲ್ ತಂತ್ರಜ್ಞಾನದ ಯುಗದಲ್ಲೂ ಒಬ್ಬ ಶಿಕ್ಷಕನಿಂದ ಸಿಗುವ ಜ್ಞಾನ ಶ್ರೇಷ್ಟ ಮಟ್ಟದ್ದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ ಜಯರಾಜ್ ಅಮೀನ್ ಹೇಳಿದರು.
ಅವರು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ “ಶ್ರೀ ಗುರುಭ್ಯೋ ನಮಃ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷರಾಗಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ, ಅಂಕಗಳಷ್ಟೇ ಜೀವನವಲ್ಲ. ಬದುಕುವ ಕಲೆಯನ್ನು ಗುರುವಾದವ ಮಾತ್ರ ಕಲಿಸಬಲ್ಲ. ಅಧ್ಯಾಪನವನ್ನು ವೃತ್ತಿ , ಉದ್ಯೋಗ ಅಂತ ಕರೆಯದೆ ಸೇವೆ ಎಂದು ಕರೆಯುವುದೇ ಸೂಕ್ತ. ದೀರ್ಘವಾದ ಬದುಕಿನಲ್ಲಿ ಬರುವ ಸಂಘರ್ಷ, ಬದುಕಿನ ಸಂಕೀರ್ಣತೆಯ ಪರಿಣಾಮಗಳನ್ನು ಹೇಳಿ ಕೊಡುವ ಅಧ್ಯಾಪನ ಸರ್ವರಿಂದಲೂ ಗೌರವಿಸಲ್ಪಡುವಂತದ್ದು. ದೇವರನ್ನು ತೋರಿಕೊಡುವ ಗುರು, ನಮ್ಮ ಜೀವನದಲ್ಲಿ ಎತ್ತರಕ್ಕೇರಲು ಇರುವ ಭಾಗ್ಯದ ಬಾಗಿಲು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಡಾ ಪ್ರವೀಣ್ ಕೆ, ಮಹಾವೀರ ಜೈನ್, ಸೌಮ್ಯಲತಾ, ಪುರುಷೋತ್ತಮ ರಾವ್, ಶ್ರೀಧರ ಜೈನ್, ಉಪಕುಲಪತಿಗಳಾದ ಡಾ ಜಯರಾಜ್ ಅಮೀನ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ಸಾಧಕರಾದ ಸ0ಸ್ಥೆಯ ಕನ್ನಡ ಉಪನ್ಯಾಸಕರಾದ ಡಾ ವಾದಿರಾಜ ಕಲ್ಲೂರಾಯ, ಕಲಾ ಶಿಕ್ಷಕ ಭಾಸ್ಕರ ನೆಲ್ಯಾಡಿ ಅವರನ್ನು ಗೌರವಿಸಲಾಯಿತು. 100 ಅಂಕ ತೆಗೆದ ವಿಷಯವಾರು ಉಪನ್ಯಾಸಕರನ್ನು ಪುರಸ್ಕರಿಸಲಾಯಿತು.
ಮಾಜಿ ಸಚಿವ ಹಾಗೂ ಸಂಸ್ಥೆಯ ಗೌರವಾಧ್ಯಕ್ಷರಾದ ಅಭಯಚಂದ್ರ ಜೈನ್, ಆಡಳಿತ ನಿರ್ದೇಶಕರಾದ ಡಾ ಸಂಪತ್ ಕುಮಾರ್ ಉಜಿರೆ, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ಸ0ಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಸ್ವಾಗತಿಸಿದರು. ವಿಲ್ಮಾ, ಜಯಶೀಲ, ಅತಿಥಿಗಳನ್ನು ಪರಿಚಯಿಸಿದರು. ರಂಜಿತ್ ಜೈನ್, ವಾಲೆಂಟಿನಾ ನಿರೂಪಿಸಿದರು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.