ಮೂಡುಬಿದಿರೆ: ನಮ್ಮ ತನದಲ್ಲಿ ಜಗತ್ತನ್ನು ನೋಡುವ, ಮತ್ತೊಬ್ಬರ ಕಷ್ಟಗಳನ್ನು ಅರಿಯುವುದರ ಮೂಲಕ ನಾವೆಲ್ಲರೂ ಒಂದೇ ಎಂಬುದನ್ನು ಧರ್ಮಗಳು ಹೇಳುತ್ತವೆ. ಮನುಷ್ಯನ ಮನಸ್ಸಿನ ಕೊಳೆಯನ್ನು ತೊಳೆಯುವ ಕೆಲಸವನ್ನು ಧರ್ಮವನ್ನು ಮಾಡುತ್ತವೆ. ಎಲ್ಲರಲ್ಲಿರೂ ದಯಾ ಗುಣವಿರಬೇಕು, ದಾನಗುಣವಿರಬೇಕು, ಪರಸ್ಪರ ಸಹಾಯ ಮಾಡುವ ಮೂಲಕ ಬಾಳಿ ಬದುಕಬೇಕು ಎ0ದು ಹೇಳುತ್ತಾ ಕೆಟ್ಟದ್ದು, ಒಳ್ಳೆಯದು ಎಲ್ಲವೂ ನಮ್ಮಲ್ಲಿಯೇ ಇದೆ ಎಂದು ಅರಿಯಬೇಕು. ಅಂಧಕಾರದಲ್ಲಿರುವವರನ್ನು ಬೆಳಕಿನೆಡೆಗೆ ಕೊಂಡೊಯ್ಯುವುದೇ ಧರ್ಮ. ಈ ನಿಟ್ಟಿನಲ್ಲಿ ಎಲ್ಲರನ್ನೂ ಧರ್ಮೀಯರನ್ನಾಗಿ ಮಾಡುವುದು ಧರ್ಮಗಳ ಕರ್ತವ್ಯವಾಗಬೇಕು ಎಂದು ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸಾಮೀಜಿಗಳು ಹೇಳಿದರು.
ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಸರ್ವ ಧರ್ಮ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇಸ್ಲಾಂ ಧರ್ಮದ ಅರಿವು ಮೂಡಿಸಲು ಆಗಮಿಸಿದ್ದ ಮಂಗಳೂರಿನ ಅಖಿಲ ಭಾರತ ಬ್ಯಾರಿ ಪರಿಷತ್ತಿನ ಅಧ್ಯಕ್ಷರು ಯು ಹೆಚ್ ಖಾಲಿದ್ ಮಾತನಾಡಿ, ನಾವ್ಯಾಕೆ ಈ ಭೂಮಿಗೆ ಬಂದದ್ದು, ಬರುವಾಗ ಏನನ್ನು ತಂದಿದ್ದೇವೆ, ಹೋಗುವಾಗ ಏನನ್ನು ಕೊಂಡು ಹೋಗುತ್ತೇವೆ ಎಂಬುವುದನ್ನು ಅರಿತು ಶಾಂತಿ ನೆಮ್ಮದಿಯಿಂದ ಬದುಕಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಲೋಕದಲ್ಲಿ ಅಲ್ಲಾ ಇದ್ದಾನೆ. ಅವನನ್ನು ಆರಾಧಿಸುವವನೇ ಮುಸಲ್ಮಾನ. ಬಡವರ ಹಸಿವು ಶ್ರೀಮಂತರಿಗೆ ಅರಿವಾಗಬೇಕಾದರೆ ಸಮಾನತೆಯ ತತ್ವವನ್ನು ತರಬೇಕು. ಅಂತಹ ಸಮಾನತೆಯ ತತ್ವವನ್ನು ರಂಜಾನ್ ಹಬ್ಬವು ಸಾರುತ್ತದೆ. ಎಲ್ಲಾ ರೀತಿಯ ತಪ್ಪುಗಳಿಗೆ ಕ್ಷಮೆಯಾಚಿಸುವುದೇ ಈ ಹಬ್ಬದ ಉದ್ದೇಶ. ಮದ್ಯಪಾನ ಮಾಡಬೇಡ, ಶೋಷಣೆ ಮಾಡಬೇಡ. ಇದರಿಂದ ಮನುಷ್ಯ, ಮನುಷ್ಯತ್ವ ಉಳಿಯುತ್ತದೆ ಎಂದು ಕುರಾನ್ ಹೇಳಿದೆ ಎನ್ನುತ್ತಾ ದೇವರಲ್ಲಿರುವ ಭಯವೇ ಜ್ಞಾನದ ಆರಂಭ. ನೀನು ಸಹಿಷ್ಣುವಾಗಿರು, ಇನ್ನೊಬ್ಬನಿಗೆ ತೊಂದರೆ ಕೊಟ್ಟುಕೊ0ಡು ಕೀಳಾಗಿ ಕಂಡರೆ ನೀನು ಮುಸಲ್ಮಾನನಲ್ಲ ಎಂದು ಇಸ್ಲಾಂ ಧರ್ಮದಲ್ಲಿ ಹೇಳಲಾಗಿದೆ. ಮಾನವ ಕುಲಕ್ಕೆ ಒಳ್ಳೆಯ ಸಂದೇಶ ಕೊಡಲು ಇಸ್ಲಾ0 ಧರ್ಮ ಉದಯಿಸಿತು. ನನ್ನ ಮಣ್ಣನ್ನು ನಾನು ರಕ್ಷಿಸಬೇಕು ಎಂಬುದನ್ನು ಅರಿಯಬೇಕು. ಎಲ್ಲಾ ಧರ್ಮಗಳನ್ನು ಪೋಷಿಸುತ್ತಿರುವ ಭಾರತ ಮಾತೆ ಅತ್ಯಂತ ಶ್ರೇಷ್ಠಳು ಎಂದರು.
ಕ್ರೈಸ್ತ ಧರ್ಮದ ಅರಿವನ್ನು ಮೂಡಿಸಲು ಆಗಮಿಸಿದ್ದ ಉಡುಪಿ ಧರ್ಮ ಪ್ರಾಂತ್ಯ ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಯ ಕಾರ್ಯ ನಿರ್ವಾಹಕ ಕಾರ್ಯದರ್ಶಿ ರೆ ಫಾದರ್ ವಿನ್ಸೆಂಟ್ ರಾಬರ್ಟ್ ಕ್ರಾಸ್ತಾ ಮಾತನಾಡಿ, ಏಸು ಪ್ರಭು ತನ್ನ ತತ್ವಗಳನ್ನು ಬೋಧಿಸಿದರು. ಅದುವೇ ಬೈಬಲ್ ಗ್ರಂಥವಾಯಿತು. ನೀವು ಬೇರೆಯವರಲ್ಲಿ ಏನನ್ನು ನಿರೀಕ್ಷಿಸುತ್ತೀರೋ ಅದನ್ನು ಇತರರಿಗೆ ಮಾಡಿ. ಹೇಗೆ ನಿಮ್ಮನ್ನು ನೀವು ಪ್ರೀತಿಸುತ್ತೀರೋ ಅದೇ ರೀತಿ ನಿಮ್ಮ ನೆರೆ ಹೊರೆಯವರನ್ನು ಪ್ರೀತಿಸಿ ಎಂದು ಹೇಳಿದ ಏಸುವಿನ ತತ್ವವನ್ನು ಸ್ಮರಿಸಿ. ಯಾವ ಧರ್ಮವೂ ಕೆಟ್ಟದ್ದನ್ನು ಬೋಧಿಸುವುದಿಲ್ಲ. ಎಲ್ಲಾ ಧರ್ಮಗಳು ಒಳ್ಳೆಯದನ್ನೇ ಕಲಿಸುತ್ತವೆ. ನಮ್ಮ ಆಚರಣೆಗಳು ಬೇರೆಯವ್ರಿಗೆ ತೊಂದರೆ ಕೊಡಬಾರದು. ಯಾವುದನ್ನು ಒತ್ತಿ ಹಿಡಿದುಕೊಳ್ಳುತ್ತೇವೆಯೋ ಅದೇ ಧರ್ಮ. ಅದನ್ನು ನಾವು ಅನುಸರಿಸಿ ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬಾಳಿ ಬದುಕಬೇಕು ಎಂದರು.
ಹಿಂದೂ ಧರ್ಮ ಅರಿವನ್ನು ಮೂಡಿಸಲು ಆಗಮಿಸಿದ್ದ ಖ್ಯಾತ ಯಕ್ಷಗಾನ ಕಲಾವಿದರಾದ ಉಜಿರೆ ಅಶೊಕ ಭಟ್ ಮಾತನಾಡಿ, ಯಾವುದು ಧಾರಣಾಯೋಗ್ಯ, ಅನುಷ್ಠಾನಯೋಗ್ಯವೋ ಅದುವೇ ಧರ್ಮ. ಒಂದು ಆರಾಧನೆಯನ್ನು ಅನುಷ್ಠಾನವನ್ನು ಗುರುತಿಸಲು ಇರುವುದೇ ಹಿಂದೂ ಧರ್ಮ. ಒಂದೊಂದು ಧರ್ಮಕ್ಕೆ ಅನ್ನವಿಲ್ಲ, ನೀರಿಲ್ಲ, ಗಾಳಿ ಇಲ್ಲ. ಎಲ್ಲಾ ಧರ್ಮಗಳಿಗೂ ಅವೆಲ್ಲಾ ಒಂದೇ ಆಗಿವೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಇಂದ್ರಿಯಗಳ ಚಾಪಲ್ಯ ತಪ್ಪಿಸಲು ದೇವರ ಆರಾಧನೆ ಬೇಕು. ಉಪಾಧಿಯೇ ದೇವರಲ್ಲ. ಉಪಾಧಿಯಲ್ಲಿ ದೇವರು. ನಂಬಿಕೆಯ ಆಧಾರದಲ್ಲಿ ಬದುಕು ನಿಂತಿದೆ. ಈ ನಂಬಿಕೆಯೇ ಹಿಂದೂ ಧರ್ಮ. ಲೋಕದಲ್ಲಿ ಮಾನವ ಧರ್ಮವೇ ಅತ್ಯಂತ ಶ್ರೇಷ್ಠವಾದದ್ದು. ದೇವರು ಸರ್ವಾಂತರ್ಯಾಮಿ. ಎಲ್ಲಾ ಧರ್ಮಗಳು ಬೋಧಿಸುವುದು ಒಳಿತುಗಳನ್ನೇ. ಎಲ್ಲಾ ಧರ್ಮಗಳು ಒಂದಾದಾಗ ಬಾಳು ಸುಂದರವಾಗುತ್ತದೆ. ಅನೇಕ ಆರಾಧನೆಗಳು ಅನೇಕ ಅನುಷ್ಠಾನಗಳನ್ನು ಅರಿತು ನಡೆಯಬೇಕು. ಇಲ್ಲಿ ಹಲವು ಧರ್ಮಗಳಿದ್ದರೂ ನಾವೆಲ್ಲಾ ಭಾರತೀಯ ಧರ್ಮದ ರಾಯಭಾರಿಗಳಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸ0ಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ, ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸಿ ಎಂದು ಹೇಳಿಕೊಡುವುದೇ ಧರ್ಮ. ನಾವೆಲ್ಲರೂ ಬದುಕು ಮತ್ತು ಬದುಕಲು ಬಿಡು ಎಂಬ ಜಾಗ್ರತೆಯಲ್ಲಿ ಬದುಕಬೇಕಾಗಿದೆ. ಎಲ್ಲಾ ಧರ್ಮದ ಸಾರ ಮನುಷ್ಯ ಧರ್ಮವೇ ಆಗಿದೆ. ಎಲ್ಲಾರೂ ಸಮಾನತೆಯಿಂದ, ಶಾಂತಿ ಸಹಬಾಳ್ವೆಯಿಂದ ಒಟ್ಟಾಗಿ ಬಾಳಿ ಬದುಕಿ ಭವ್ಯ ಭಾರತ ಧರ್ಮವನ್ನು ರಕ್ಷಿಸೋಣ ಎಂದರು.
ಇದೇ ಸಂದರ್ಭದಲ್ಲಿ ಗ್ಲೋಬರ್ ಅಂಬಾಸಿಡೆಅರ್ ಆಫ್ ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ದೆಹಲಿಯಲ್ಲಿ ಸ್ವೀಕರಿಸಿದ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್‌ರನ್ನು ಗೌರವಿಸಲಾಯಿತು.
ಡಾ ವಾದಿರಾಜ ಕಲ್ಲೂರಾಯ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮತ್ತಿರರು ಉಪಸ್ಥಿತರಿದ್ದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ವಿಲ್ಮಾ ಮರಿಯ ರೋಡ್ರಿಗಸ್, ಹರೀಶ್ ಎಂ, ಪ್ರದೀಪ್ ಕೆಪಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ವಂದಿಸಿದರು. ಉಪನ್ಯಾಸಕ ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿದರು.