ಮೂಡುಬಿದಿರೆ : ಇಲ್ಲಿನ ಅರಮನೆ ಬಾಗಿಲಿನಲ್ಲಿರುವ ಸ್ಪೂರ್ತಿ ವಿಶೇಷ ಶಾಲೆಯಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಮೂಡುಬಿದಿರೆ ರೋಟರಿ ಕ್ಲಬ್ ನ ಅಧ್ಯಕ್ಷ ನಾಗರಾಜ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಅದರಲ್ಲೂ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಅವರನ್ನು ಸಲಹುತ್ತಿರುವ ಶಿಕ್ಷಕರು ನಿಜಕ್ಕೂ ಸ್ಫೂರ್ತಿದಾಯಕರಾಗಿದ್ದಾರೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸುವ ವಿವಿಧ ಸ್ಪರ್ಧೆಗಳು ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗುತ್ತದೆ ಎಂದರು.
‘ಕ್ರೀಡಾರತ್ನ’ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಗಾಯಕಿ ಕೃತಿಕಾ ಮಾಳ, ಕಲಾವಿದ ವೆಂಕಟೇಶ ಬಂಗೇರಾ ಅತಿಥಿಗಳಾಗಿ ಭಾಗವಹಿಸಿದ್ದರು.
ನಿವೃತ್ತ ಶಿಕ್ಷಕ, ರಂಗಭೂಮಿ ಕಲಾವಿದ ಇಂದು.ಎಸ್.ಮAಗಳೂರು ಅವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಇಂದು ಅವರು ಶಿಕ್ಷಕರು, ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಾಗೂ ತನ್ನ ಶಿಷ್ಯ ಪ್ರಕಾಶ್ ಜೆ. ಶೆಟ್ಟಿಗಾರ್ ಅವರ ಸಾಧನೆಯ ಕುರಿತಾದ ಸ್ವರಚಿತ ಹಾಡನ್ನು ಹಾಡಿದರು.
ಶಾಲೆಯ ಶಿಕ್ಷಕಿಯರನ್ನು ಮತ್ತು ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕಿಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಸಂಸ್ಥೆಯ ಮುಖ್ಯಸ್ಥ ಪ್ರಕಾಶ್ ಜೆ.ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಖಜಾಂಜಿ ರಮೀಝಾ ಬಾನು ವಂದಿಸಿದರು.
ಶಿಕ್ಷಕಿಯರಿAದ ಹಳ್ಳಿಯ ಸೊಗಡು ಅನಾವರಣ :
ಸಂಸ್ಥೆಯ 9 ಮಂದಿ ಶಿಕ್ಷಕಿಯರು ಸೇರಿ ತುಳುನಾಡಿನ ಪಾರಂಪರಿಕ ವಸ್ತುಗಳು, ಔಷಧೀಯ ಗುಣಗಳಿರುವ ಗಿಡ ಮೂಲಿಕೆಗಳು, ಖಾದ್ಯಗಳು ಮತ್ತು ವಸ್ತುಗಳು, ಹಳ್ಳಿಯ ತಿಂಡಿ ತಿನಿಸುಗಳು ಹಾಗೂ ಪುಷ್ಪಗುಚ್ಛಗಳನ್ನು ತಯಾರಿಸಿ ಪ್ರದರ್ಶನಗೊಳಿಸಿದರು.