ನವದೆಹಲಿ: ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪನವರಿಗೆ ಕೇಂದ್ರ ಗೃಹ ಇಲಾಖೆಯು ಝಡ್ ಕೆಟಗರಿ ಭದ್ರತೆ ನೀಡಿ ಆದೇಶಿಸಿದೆ
ಗುಪ್ತಚರ ವಿಭಾಗವು ಬಿಎಸ್ ವೈಗೆ ಬೆದರಿಕೆ ಇರುವ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಬಿಎಸ್ ವೈ ಅವರಿಗೆ ಝಡ್ ಕೆಟಗರಿ ಭದ್ರತೆಯನ್ನು ನೀಡಿದೆ. ಯಡಿಯೂರಪ್ಪ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿಈ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ಕೈಗೊಂಡಿದೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲಭೂತ ಗುಂಪುಗಳಿಂದ ಸಂಭಾವ್ಯ ಬೆದರಿಕೆಗಳಿವೆ ಎಂದು ತಿಳಿದುಬಂದಿದೆ.
ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ಯಡಿಯೂರಪ್ಪ ಅವರಿಗೆ ಭದ್ರತೆ ಹೆಚ್ಚಿಸಲಾಗಿದ್ದು, ಕೇಂದ್ರ ಮೀಸಲು ಪೊಲೀಸ್ ಪಡೆಯ ಕಮಾಂಡೋಗಳು ಭದ್ರತೆ ಒದಗಿಸಲಿದ್ದಾರೆ.
ಯಡಿಯೂರಪ್ಪ ಅವರ ಭದ್ರತೆಗೆ ಒಟ್ಟು 33 ಝಡ್ ಕೆಟಗರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡ್ ಗಳನ್ನು ಅವರ ನಿವಾಸದಲ್ಲಿ ಇರಿಸಲಾಗುತ್ತಿದ್ದು ಅವರಿಗೆ ಪೂರಕವಾಗಿ ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಹಗಲು ರಾತ್ರಿ ದಿನದ 24 ಗಂಟೆ ಕಾಯುತ್ತಿರುತ್ತಾರೆ. ಸಂಭಾವ್ಯ ಬೆದರಿಕೆಗಳ ವಿರುದ್ಧ ನಿರಂತರ ಎಚ್ಚರವಹಿಸಲು 12 ಸಶಸ್ತ್ರ ಬೆಂಗಾವಲು ಕಮಾಂಡೋಗಳನ್ನು ಮೂರು ಪಾಳಿಗಳಲ್ಲಿ ನಿಯೋಜಿಸಲಾಗುವುದು. ನಿರಂತರ ಕಣ್ಗಾವಲು ಕಾಯ್ದುಕೊಳ್ಳಲು, ಇಬ್ಬರು ವೀಕ್ಷಕರನ್ನು ಶಿಫ್ಟ್ ಗಳಲ್ಲಿ ನಿಯೋಜಿಸಲಾಗುವುದು, ಒಟ್ಟಾರೆ ಭದ್ರತಾ ಚೌಕಟ್ಟನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ. ಈ ಕ್ರಮಗಳ ಜೊತೆಗೆ, ಯಡಿಯೂರಪ್ಪನವರು ಮೂರು ತರಬೇತಿ ಪಡೆದ ಚಾಲಕರನ್ನು ಹೊಂದಿರುತ್ತಾರೆ.