Share this news

ಉಡುಪಿ: ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಇದರ ಭಾಗವಾಗಿ ಮೇ.4 ರಂದು ಉಡುಪಿಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.

ಮೋದಿ ಜೊತೆಗೆ ಉತ್ತರ ಪ್ರದೇಶದಲ್ಲಿ ಮಾಫಿಯಾ ಮಟ್ಟ ಹಾಕುತ್ತಿರುವ, ಎನ್‌ಕೌಂಟರ್ ಮೂಲಕ ಗ್ಯಾಂಗ್‌ಸ್ಟರ್ ಸದ್ದಡಗಿಸುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಆಗಮನದಿಂದ ಭಾರಿ ಭಿಗಿ ಭದ್ರತೆ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಕರ್ನಾಟಕದ ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ 15 ರಿಂದ ರ್ಯಾಲಿ ನಡೆಸಲಿದ್ದಾರೆ. ಇದೀಗ ಮೇ. 4 ರಂದು ಉಡುಪಿ ನಗರದ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಮೋದಿ ಆಗಮಿಸುತ್ತಿದ್ದಾರೆ. ಈ ಬಾರಿಯ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಆಗಮನ ರಾಜ್ಯದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ.

ಅದರಲ್ಲೂ ವಿಶೇಷವಾಗಿ ಯೋಗಿ ಆದಿತ್ಯನಾಥ್ ಗಟ್ಟಿ ನಿರ್ಧಾರಗಳು ಭಾರತದಲ್ಲೇ ಸಂಚಲನ ಸೃಷ್ಟಿಸಿದೆ.  ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ 8 ಆರೋಪಿಗಳ ಪೈಕಿ 6 ಮಂದಿಯನ್ನು ಎನ್‌ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಈ ನಡೆಯಿಂದ ಯೋಗಿ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಯೋಗಿ ಮುಂದಿನ ಪ್ರಧಾನಿ ಆಗಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಯುಪಿ ಸತತ ಎನ್‌ಕೌಂಟರ್ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.

ಕರಾವಳಿ ಕರ್ನಾಟಕ ಬಿಜೆಪಿಯ ಭದ್ರಕೋಟೆ. ಉಡುಪಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ 8ರ ಪೈಕಿ 7 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಹಿಂದುತ್ವ ಇಲ್ಲಿ ಪ್ರಮುಖ ವಿಚಾರ. ಹೀಗಾಗಿ ಹಿಂದುತ್ವ ಮತಗಳನ್ನು ಕ್ರೋಢಿಕರಿಸಲು ಇದೀಗ ಖುದ್ದು ಯೋಗಿ ಆದಿತ್ಯನಾಥ್ ಕರಾವಳಿಗೆ ಎಂಟ್ರಿಕೊಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ರೀತಿಯ ಮುಖ್ಯಮಂತ್ರಿ ಕರ್ನಾಟಕಕ್ಕೂ ಅವಶ್ಯಕತೆ ಇದೆ ಅನ್ನೋ ಕೂಗು ಎದ್ದಿರುವ ಬೆನ್ನಲ್ಲೇ ಇದೀಗ ಸ್ವತ ಯೋಗಿ ಆಗಮಿಸುತ್ತಿರುವುದು ಬಿಜೆಪಿ ಕಾರ್ಯಕರ್ತರ ಸಂಭ್ರಮ ಹೆಚ್ಚಿಸಿದೆ.

Leave a Reply

Your email address will not be published. Required fields are marked *