Share this news

ನವದೆಹಲಿ : ಭಯೋತ್ಪಾದನಾ ಸಂಘಟನೆಗಳೊಂದಿಗೆ ನಂಟು, ಉಗ್ರ ಕೃತ್ಯಕ್ಕೆ ಹಣಕಾಸಿನ ನೆರವು ಮತ್ತು ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾದ ಕಾರಣಕ್ಕಾಗಿ ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಒಳಗಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI), ಮೊದಲು ದಕ್ಷಿಣ ಭಾರತವನ್ನು ‘ವಶ’ಪಡಿಸಿಕೊಂಡು ಬಳಿಕ, ದೇಶದ ಉತ್ತರದ ಭಾರತದ ಮೇಲೆ ‘ದಾಳಿ’ಗೆ ಸಂಚು ರೂಪಿಸಿತ್ತು ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.

2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್‌ ದೇಶವನ್ನಾಗಿ ರೂಪಿಸುವ ಬೃಹತ್‌ ಗುರಿಯನ್ನು ಪಿಎಫ್‌ಐ ಹಾಕಿಕೊಂಡ ಬಗ್ಗೆ ದೇಶದ ವಿವಿಧ ರಾಜ್ಯಗಳಲ್ಲಿ ಎನ್‌ಐಎ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಪ್ರಸ್ತಾಪ ಮಾಡಲಾಗಿತ್ತಾದರೂ, ಯೋಜನೆ ಜಾರಿಗೆ ರೂಪಿಸಿದ ಸಂಚಿನ ಬಗ್ಗೆ ಇದೇ ಮೊದಲ ಬಾರಿಗೆ ಎನ್‌ಐಎ ಬೆಳಕು ಚೆಲ್ಲಿದೆ.

ಕಳೆದ ವರ್ಷ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿ ನೂರಾರು ಜನರನ್ನು ಬಂಧಿಸಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಈ ಸಂಬಂಧ ಶನಿವಾರ 19 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

ಈ ಆರೋಪಪಟ್ಟಿಯಲ್ಲಿ ‘ಭಾರತದ ವಿರುದ್ಧ 4 ಹಂತಗಳಲ್ಲಿ ‘ಯುದ್ಧ’ ನಡೆಸಬೇಕು ಎಂದು ಪಿಎಫ್‌ಐ ಸಂಚು ರೂಪಿಸಿತ್ತು’ ಮತ್ತು ‘ಭಾರತೀಯ ಸೇನೆ ಪಾಕ್‌ ವಿರುದ್ಧ ಕಾಶ್ಮೀರದಲ್ಲಿ ಕಾರಾರ‍ಯಚರಣೆಯಲ್ಲಿ ಗಮನ ಹರಿಸಿದಾಗ, ದಕ್ಷಿಣ ಭಾರತದಲ್ಲಿ ತನ್ನ ಸಂಘಟನೆ ಬಲಗೊಳಿಸಿ ದಕ್ಷಿಣವನ್ನು ಮೊದಲು ವಶಪಡಿಸಿಕೊಳ್ಳಬೇಕು. ನಂತರ ಉತ್ತರದತ್ತ ಸಾಗಬೇಕು ಎಂಬ ಹುನ್ನಾರ ನಡೆಸಿತ್ತು’ ಎಂಬ ಸ್ಫೋಟಕ ಮಾಹಿತಿಗಳಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ದಿಲ್ಲಿ ಕೋರ್ಟ್‌ಗೆ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ, ‘ಬಂಧಿತ 19 ಮಂದಿಗೂ ತರಬೇತಿ ವೇಳೆ ಯುದ್ಧ ಸಾರುವ ವಿಷಯ ತಿಳಿಸಲಾಗಿತ್ತು. ರಹಸ್ಯವಾಗಿ ಸದಸ್ಯರನ್ನು ನೇಮಿಸಿಕೊಳ್ಳುವುದು ಹಾಗೂ ದೇಶಾದ್ಯಂತ ಇವರಿಗೆ ತರಬೇತಿ ನೀಡಿ ‘ಸೇನೆ’ ಕಟ್ಟುವುದು ಪಿಎಫ್‌ಐ ಸಂಚಿನ ಭಾಗವಾಗಿತ್ತು. ಈ ಮೂಲಕ ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವುದು ಸಂಘಟನೆಯ ಉದ್ದೇಶವಾಗಿತ್ತು’ ಎಂದು ಹೇಳಲಾಗಿದೆ.

ಚಾರ್ಜ್‌ಶೀಟ್ ನಲ್ಲಿ ಮಾಫಿಸಾಕ್ಷಿಯಾಗಿ ಬದಲಾಗಿರುವ ಒಬ್ಬನ ಹೇಳಿಕೆ ದಾಖಲಿಸಲಾಗಿದೆ. ‘ಪಾಕಿಸ್ತಾನದ ಉಪಟಳ ಹೆಚ್ಚಿದಾಗ ಕಾಶ್ಮೀರ ಗಡಿ ಉದ್ವಿಗ್ನಗೊಳ್ಳುತ್ತದೆ. ಆಗ ಸೇನೆ ಉತ್ತರ ಗಡಿಯತ್ತ ಗಮನ ಹರಿಸಲಿದೆ. ಇದೇ ಸಮಯ ಬಳಸಿಕೊಂಡು ದಕ್ಷಿಣ ಭಾಗದಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ಪಿಎಫ್‌ಐ ನಡೆಸಬೇಕು. ಮೊದಲು ದಕ್ಷಿಣ ವಶಪಡಿಸಿಕೊಂಡು ನಂತರ ಉತ್ತರ ಭಾಗದತ್ತ ಸಾಗಬೇಕು ಎಂದು ತನ್ನ ಕಾರ್ಯಕರ್ತರಿಗೆ ಸೂಚಿಸಿತ್ತು. ಈ ಮೂಲಕ ಭಾರತದ ವಿರುದ್ಧ ಯುದ್ಧ ಸಾರಲು ನಿರ್ಧರಿಸಿತ್ತು’ ಎಂದು ಮಾಫಿಸಾಕ್ಷಿ ಹೇಳಿದ್ದಾನೆ.

2047ರಲ್ಲಿ ಭಾರತ ಇಸ್ಲಾಮಿಕ್‌ ದೇಶ ಮಾಡಲು 4 ಹಂತದ ಯುದ್ಧ

4 ಹಂತದಲ್ಲಿ ಭಾರತದ ವಿರುದ್ಧ ಯುದ್ಧ ನಡೆಸಬೇಕು ಎಂಬುದು ಪಿಎಫ್‌ಐ ಇರಾದೆ ಆಗಿತ್ತು ಎಂದು ಚಾಜ್‌ರ್‍ಶೀಟ್‌ನಲ್ಲಿ ಎನ್‌ಐಎ ಉಲ್ಲೇಖಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಆ ನಾಲ್ಕು ಹಂತಗಳು ಇಂತಿವೆ:

1.ದೇಶದಲ್ಲಿ ಮುಸ್ಲಿಮರನ್ನು ಒಗ್ಗೂಡಿಸುವುದು ಮತ್ತು ಪಿಎಫ್‌ಐ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವುದು

2.ಬಲ ಪ್ರದರ್ಶಿಸಲು ಮತ್ತು ವಿರೋಧಿಗಳನ್ನು ಭಯಭೀತಗೊಳಿಸಲು ದೇಶದ ಅಲ್ಲಲ್ಲಿ ಹಿಂಸಾಚಾರ ನಡೆಸುವುದು

3.ರಾಜಕೀಯ ಲಾಭಕ್ಕಾಗಿ ಹಿಂದೂಗಳನ್ನು ವಿಭಜಿಸಲು ಎಸ್‌ಸಿ/ಎಸ್‌ಟಿ/ಒಬಿಸಿಗಳ ಜತೆ ಮೈತ್ರಿ ಮಾಡಿಕೊಳ್ಳುವುದು

4.ಪೊಲೀಸ್‌ ವ್ಯವಸ್ಥೆ, ಭಾರತೀಯ ಸೇನೆ ಮತ್ತು ನ್ಯಾಯಾಂಗದ ಸೇವೆಗೆ ಪಿಎಫ್‌ಐ ಕಾರ‍್ಯಕರ್ತರನ್ನು ಸೇರಿಸುವುದು

Leave a Reply

Your email address will not be published. Required fields are marked *