ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಅಪಶಕುನ ಎಂಬ ವಿಪಕ್ಷ ನಾಯಕರ ಕೀಳುಮಟ್ಟದ ಟೀಕೆಗಳು ಮುಂದುವರಿದಿದ್ದು, ಮೋದಿ ಹಾರಾಡಿದ ತೇಜಸ್ ಯುದ್ಧ ವಿಮಾನ ಕೂಡ ಅಪಶಕುನದಿಂದ ಪತನವಾಗುವ ಸಾಧ್ಯತೆ ಇದೆ ಎಂದು ಟಿಎಂಸಿ ನಾಯಕ ಶಾಂತನು ಸೇನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರಧಾನಿಗೆ ಅಪಶಕುನ ಹಿಡಿದಿದೆ ಯಾಕೆಂದರೆ ಅವರು ತೆರಳಿದ ಕಡೆಯೆಲ್ಲ ಅಪಜಯ ಉಂಟಾಗುತ್ತಿದೆ. ಅದೇ ರೀತಿ ಶನಿವಾರ ಬೆಂಗಳೂರಿನಲ್ಲಿ ತೇಜಸ್ ಯುದ್ಧ ವಿಮಾನದ ಪರೀಕ್ಷೆಗೆ ತೆರಳಿ ಅದರಲ್ಲಿ ಕೆಲ ಕಾಲ ಹಾರಾಡಿದ್ದಾರೆ. ಹಾಗಾಗಿ ಅವರಿಗೆ ತಾಗಿರುವ ಅಪಶಕುನದ ಫಲವಾಗಿ ತೇಜಸ್ ಯುದ್ಧ ವಿಮಾನವೂ ಕೂಡ ಸೇನಾ ಕಾರ್ಯಾಚರಣೆ ನಡೆಸುವಾಗ ಪತನವಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಇದಕ್ಕೆ ಬಿಜೆಪಿ ನಾಯಕರಾದ ಮಂಜಿಂದರ್ ಸಿಂಗ್ ಸಿರ್ಸಾ ಹಾಗೂ ಶಹಜಾದ್ ಪೂನಾವಾಲಾ ಕಿಡಿಕಾರಿದ್ದು, ತೇಜಸ್ ಯುದ್ಧ ವಿಮಾನ ಪತನ ಆಗುತ್ತದೆ ಎಂದು ಸೇನ್ ಯಾವ ಆಧಾರದಲ್ಲಿ ಹೇಳಿದ್ದಾರೆ ಎಂದು ಪ್ರಶ್ನಿಸಿದ ಅವರು ಕೂಡಲೇ ಸೇನ್ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮೋದಿ ವೀಕ್ಷಿಸಿದ್ದರಿಂದಲೇ ಅಪಶಕುನವಾಗಿ (ಪನೌತಿ) ಭಾರತ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೋತಿತು ಎಂದು ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದರು. ಅದರ ಬಳಿಕ ಅಪಶಕುನದ ಚರ್ಚೆ ಆರಂಭವಾಗಿತ್ತು.