ಬೆಂಗಳೂರು: ಸುಳ್ಳು ಕೇಸ್ ದಾಖಲು, ಭ್ರಷ್ಟಾಚಾರ, ಸುಲಿಗೆ, ಅನುಚಿತ ವರ್ತನೆ ಸೇರಿ ಪೊಲೀಸರ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ನಿಯಂತ್ರಣ ಹಾಗೂ ಕರ್ತವ್ಯದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ದೇಹಕ್ಕೆ (ಬಾಡಿವೋರ್ನ್) ಕ್ಯಾಮರಾ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.
ಯಾವುದೇ ಪ್ರಕರಣದಲ್ಲಿ ವ್ಯಕ್ತಿಯನ್ನು ಬಂಧಿಸುವ ಸಂದರ್ಭದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಯೂ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರಬೇಕು ಎಂದು ಡಿಜಿ-ಐಜಿ ಆದೇಶಿಸಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ಸಂಚಾರ ಹಾಗೂ ಹೊಯ್ಸಳ ಪೊಲೀಸರಿಗಷ್ಟೇ ಸೀಮಿತವಾಗಿದ್ದ ಬಾಡಿವೋರ್ನ್ ಕ್ಯಾಮರಾ ಧರಿಸುವ ಯೋಜನೆಯನ್ನು ರಾಜ್ಯದ ಎಲ್ಲಾ ಪೊಲೀಸರಿಗೂ ವಿಸ್ತರಿಸಿ ಡಿಜಿ ಆದೇಶಿಸಿದ್ದಾರೆ.
ಬಂಧನದ ವೇಳೆ ಕ್ಯಾಮರಾಗಳನ್ನು ಧರಿಸುವ ವ್ಯವಸ್ಥೆ ಜಾರಿಗೊಳಿಸುವಂತೆ 2022ರ ಜೂನ್ 10 ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಪೊಲೀಸ್ ಇಲಾಖೆ ಈಗ ಅನುಷ್ಠಾನಕ್ಕೆ ತರುತ್ತಿದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಕೂಡ ಹೊರಡಿಸಲಾಗಿದ್ದು, ವ್ಯಕ್ತಿಗಳ ಮುಖಗಳು ಹಾಗೂ ಸ್ಥಳದ ಘಟನಾವಳಿಗಳು ಸರಿಯಾಗಿ ಚಿತ್ರೀಕರಣವಾಗುವಂತೆ ಎಡಭುಜಕ್ಕೆ ಬಾಡಿವೋರ್ನ್ ಕ್ಯಾಮರಾ ಧರಿಸಿರಬೇಕು. ಯಾರ ಬಗ್ಗೆ ರೆಕಾರ್ಡ್ ಮಾಡಲಾಗುತ್ತಿದೆಯೋ ಅವರಿಗೆ ಚಿತ್ರೀಕರಣದ ಬಗ್ಗೆ ತಿಳಿಸಬೇಕು ಎಂದಿದೆ.
ಆಯಾ ಘಟಕದ ಮುಖ್ಯಸ್ಥರು, ಕ್ಯಾಮರಗಳ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕ್ಯಾಮರಾ ಬಳಕೆಯ ತರಬೇತಿ ಪಡೆದ ಅಧಿಕಾರಿ ಮತ್ತು ಸಿಬ್ಬಂದಿಗಷ್ಟೇ ಕೊಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ