ಕಾರ್ಕಳ:ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದು,ಮುತಾಲಿಕ್ ಸ್ಪರ್ಧೆಯ ಹಿನ್ನೆಲೆಯಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರವು ಸಾಕಷ್ಟು ಜಿದ್ದಾಜಿದ್ದಿ ರಣಕಣವಾಗಿ ಮಾರ್ಪಾಡಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಈ ನಡುವೆ ಕಾರ್ಕಳದಲ್ಲಿ ಈ ಬಾರಿ ಮಹಿಳಾ ಅಭ್ಯರ್ಥಿಯೋರ್ವರು ಚುನಾವಣಾ ಆಕಾಂಕ್ಷಿಯಾಗಿದ್ದಾರೆ.ಸಾವಿತ್ರಿ ಸತ್ಯವಾನ್ ಟ್ರಸ್ಟ್ ನ ಸಂಸ್ಥಾಪಕಿ ಡಾ.ಮಮತಾ ಹೆಗ್ಡೆ ಈ ಬಾರಿ ಕಾರ್ಕಳದಿಂದ ಸ್ಪರ್ಧಿಸಿ ಒಲವು ತೋರಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಮತಾ ಹೆಗ್ಡೆ,ವೇದಗಳಲ್ಲಿ ಹೇಳಿದಂತೆ ವಸುದೈವ ಕುಟುಂಬಕಂ ಹಾಗೂ ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ಎಲ್ಲರೂ ಒಂದಾಗಿ ಜಾತಿ ಬೇಧ ಮರೆತು ನಾವೆಲ್ಲರೂ ಕಾರ್ಕಳದಲ್ಲಿ ಒಂದಾಗಿ ಬಾಳುವ ವಾತಾವರಣ ನಿರ್ಮಾಣ ಮಾಡುವುದು ನನ್ನ ಕನಸಾಗಿದೆ.ಭ್ರಷ್ಟಾಚಾರ ರಹಿತ ಕಾರ್ಕಳ,ಕೈಗಾರಿಕೆ ಶಿಕ್ಷಣ, ಉದ್ಯೋಗ, ಮಹಿಳಾ ಸಬಲೀಕರಣ,ತೋಟಗಾರಿಕೆ, ಕೃಷಿ, ಸಂರಕ್ಷಣೆ, ರಫ್ತು ಮಾರಾಟ, ನೀರಾವರಿ ವ್ಯವಸ್ಥೆ, ರಸ್ತೆ, ಶುಚಿತ್ವ ಮುಂತಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದೇ ನನ್ನ ಮೂಲ ಉದ್ದೇಶವಾಗಿದೆ ಎಂದರು.
ರಾಣಿ ಅಬ್ಬಕ್ಕದೇವಿ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರ ಮಹಿಳೆ.ಅಂತಹ ಮಹಿಳೆ ಆಳಿದ ನಮ್ಮ ತುಳುನಾಡಿನಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಬೆಳೆಯಬೇಕಿದೆ.ಕಾರ್ಕಳದಲ್ಲಿ 97,047 ಮಹಿಳಾ ಮತದಾರರಿದ್ದಾರೆ.ಅಂದರೆ ಪುರುಷರಿಗಿಂತ ಹೆಚ್ಚು.ಹೀಗಿರುವಾಗ ಮಹಿಳಾ ಸ್ವಾವಲಂಬನೆಗೆ ಕಾರ್ಕಳದಲ್ಲಿ ಕೊಡುಗೆ ಶೂನ್ಯ.ಇದೇ ಉದ್ದೇಶದಿಂದ ಕಾರ್ಕಳಕ್ಕೆ ವಿದ್ಯಾವಂತ ಮಹಿಳೆ ರಾಜಕಾರಣದಲ್ಲಿ ಅವಶ್ಯಕತೆಯಿದೆ.ಆದುದರಿಂದ ಕಾರ್ಕಳದ ಪುರುಷ ಹಾಗೂ ಮಹಿಳಾ ಮತದಾರರು ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ.ಕಾರ್ಕಳದ ಪ್ರಜ್ಞಾವಂತ ಮತದಾರರು ಸಹೋದರ ಸಹೋದರಿಯರು ದಿಟ್ಟ ನಿಲುವನ್ನು ತೆಗೆದುಕೊಂಡು ಕ್ರಾಂತಿಯ ಹೆಜ್ಜೆಯನ್ನಿಟ್ಟು ಬದಲಾವಣೆ ತಂದೆ ತರುತ್ತಾರೆ ಎನ್ನುವ ಆಶಾಭಾವ ನನಗಿದೆ ಎಂದರು.
ನಾನು ಕಾರ್ಕಳದಲ್ಲಿ ಹುಟ್ಟಿಬೆಳೆದವಳು,ನನಗೆ ದುಡ್ಡೇ ಮಾಡಬೇಕು ಅಂತಿದ್ದರೆ ರಾಜಕೀಯಕ್ಕೆ ಬರಬೇಕಿಲ್ಲ, ನಾನು ದುಡ್ಡು ಖರ್ಚು ಮಾಡಿ ದುಡ್ಡು ತೆಗೆಯಲು ಬಂದಿಲ್ಲ.ಬಡ ಕಾರ್ಯಕರ್ತರು ದುಡಿದ ಹಣದಲ್ಲಿ ಶೋಕಿ ಮಾಡಲು ಬಂದಿಲ್ಲ.ಯಾರಿಂದಲೂ ಹಣ ಪಡೆದು ಕಮಿಷನ್ ಮಾಡಲು ಬಂದಿಲ್ಲ.ನನ್ನ ಉದ್ದೇಶ ಕಾರ್ಕಳದಲ್ಲಿ ಬದಲಾವಣೆ ತರಬೇಕು.ಭ್ರಷ್ಟಾಚಾರ ಮುಕ್ತ ಆಗಬೇಕು.ಜನಸಾಮಾನ್ಯರು ನಿರಾಳವಾಗಿ ಬದುಕುವಂತಾಗಬೇಕು ಎಂದು ಡಾ.ಮಮತಾ ಹೆಗ್ಡೆ ಹೇಳಿದರು.
“ನಮ್ಮ ಕಾರ್ಕಳ ವಿಧಾನ ಸಭಾ ಕ್ಷೇತ್ರವು ಮಹಿಳಾ ಮತದಾರರೇ ಜಾಸ್ತಿ ಇರುವ ಕ್ಷೇತ್ರವಾಗಿದ್ದು, ಸ್ವಾತಂತ್ರ್ಯದ ನಂತರ ಈ ವರೆಗೆ ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯನ್ನು ಅಭ್ಯರ್ಥಿಯಾಗಿ ನಿಲ್ಲಿಸಲಿಲ್ಲ. ಈ ಕಾರಣಕ್ಕಾಗಿ ನಾನು ನನ್ನ ಹುಟ್ಟಿದ ಊರಿನ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿರುತ್ತೇನೆ. ಈ ಒಂದು ಸದುದ್ದೇಶದ ಚಿಂತನೆಯನ್ನು ಮಾನ್ಯ ಮತದಾರರು ವಿಜಯದ ಅವಕಾಶವನ್ನಾಗಿ ಪರಿವರ್ತಿಸಿದರೆ, ಕಾರ್ಕಳ ಕ್ಷೇತ್ರದ ಜನರ ಸರ್ವಾಂಗಿಣ ಪ್ರಗತಿಗಾಗಿ, ತನು-ಮನಗಳಿಂದ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಕಪ್ಪು ಚುಕ್ಕೆಗೆ ಅವಕಾಶ ನೀಡದೆ, ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದರು.
ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ನೌಕರಿಗಾಗಿ ಸ್ವರ್ದಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ಪರೀಕ್ಷಾ ಪೂರ್ವ ತರಬೇತಿಯ ವ್ಯವಸ್ಥೆಯನ್ನು ನಮ್ಮ ಕ್ಷೇತ್ರದಲ್ಲಿ ಸರ್ಕಾರಿ/ಖಾಸಗಿ ಸಹಭಾಗಿತ್ವದೊಂದಿಗೆ ತೆರೆಯಲು ಶ್ರಮಿಸುತ್ತೇನೆ. ಈ ಮೂಲಕ ಕ್ಷೇತ್ರದ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳಲಿ, ಬ್ಯಾಂಕ್, ರೈಲ್ವೆ ಹಾಗೂ ಇನ್ನಿತರ ಇಲಾಖೆಗಳಲ್ಲಿ ಕೆಲಸ ದೊರಕಿಸಿಕೊಳ್ಳಲು ಸಹಾಯವಾಗುತ್ತದೆ.ಕೇಂದ್ರ ಸರ್ಕಾರದ ಯೋಜನೆಯಂತೆ ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು.ಆದರೆ ನಮ್ಮ ಉಡುಪಿ ಜಿಲ್ಲೆಯಲ್ಲಿ ಈವರೆಗೆ ನಮ್ಮ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ ಸ್ಥಾಪನೆ ಆಗಲಿಲ್ಲ. ಇದನ್ನು ಕಾರ್ಕಳ ಕ್ಷೇತ್ರದಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತೇನೆ. ಕ್ಷೇತ್ರದಲ್ಲಿರುವ ಕುಶಲಕರ್ಮಿಗಳು ತಯಾರಿಸುವ ಬುಟ್ಟಿ ಇತ್ಯಾದಿ ಕರಕುಶಲ ವಸ್ತುಗಳಿಗೆ ಉತ್ತಮ ಬೆಲೆ ಮತ್ತು ಮಾರುಕಟ್ಟೆಯನ್ನು ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಸುನೀಲ್ ಕುಮಾರ್ ಈಗಾಗಲೇ ಐದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಕಾರ್ಕಳಕ್ಕೆ ಈಗಾಗಲೇ ಅವರ ಕೆಲಸ ಏನು ಎಂದು ತೋರಿಸಿಕೊಟ್ಟಿದ್ದಾರೆ.ಬಿಜೆಪಿ ಪಕ್ಷ ವ್ಯಕ್ತಿಕೇಂದ್ರಿತ ಪಕ್ಷವಲ್ಲ.ವಿಚಾರ ಕೇಂದ್ರಿತ ಪಕ್ಷ.ಆದುದರಿಂದ ಒಬ್ಬ ವ್ಯಕ್ತಿಯನ್ನೇ ಮತ್ತೆ ಮತ್ತೆ ಬಿಜೆಪಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ಇದೆ.ಇವತ್ತು ಕಾರ್ಕಳದ ಬಿಜೆಪಿಯಲ್ಲಿದ್ದವರೇ ಪ್ರಮೋದ್ ಮುತಾಲಿಕ್ ರವರನ್ನು ಕರೆದುಕೊಂಡು ಬಂದಿದ್ದಾರೆ.ಬಿಜೆಪಿಯನ್ನು ಬೆಳೆಸಿದವರೂ ಅವರೇ.ಕಾರ್ಕಳದಲ್ಲಿ ಕಾಂಗ್ರೆಸ್ ಗಿಂತ ಹೆಚ್ಚು ಪ್ರಮೋದ್ ಮುತಾಲಿಕ್ ರವರ ಕೆಲಸ ಕಾರ್ಯಗಳು ನಡೆಯುತ್ತಿದೆ.ಹೀಗಿದ್ದಾಗ ನೀವೇ ಯೋಚನೆ ಮಾಡಿ ಸುನೀಲ್ ಕುಮಾರ್ ವಿರೋಧ ಅಲೆ ಪಕ್ಷದಲ್ಲಿಯೇ ಎಷ್ಟಿದೆ ಎಂದು.ಒಂದು ವೇಳೆ ನನಗೆ ಟಿಕೆಟ್ ನೀಡಿದರೆ ಇವತ್ತು ಕಾರ್ಕಳದಲ್ಲಿ ಸುನೀಲ್ ಕುಮಾರ್ ರವರಿಂದ ಬಿಜೆಪಿ ಬಿಟ್ಟುಹೋದ ಕಾರ್ಕಳದ ಬಿಜೆಪಿ ಕಾರ್ಯಕರ್ತರನ್ನು ಪ್ರಮುಖರನ್ನು ಮತ್ತೆ ಬಿಜೆಪಿಗೆ ಕರೆತರುವ ಜವಾಬ್ದಾರಿ ನನ್ನದು ಎಂದರು.