Share this news

ಕಾರ್ಕಳ: ರಾಜಕೀಯ ವ್ಯವಸ್ಥೆಯಲ್ಲಿ ಟೀಕೆಗಳು ಸಹಜ ಆದರೆ ಟೀಕಿಸುವ ಭರದಲ್ಲಿ ಸತ್ಯಕ್ಕೆ ಅಪಚಾರವಾಗಬಾರದು. ಕ್ಷೇತ್ರದ ಅಭಿವೃದ್ಧಿಯನ್ನೇ ಭ್ರಷ್ಟಾಚಾರ ಎಂದು ವ್ಯಾಖ್ಯಾನಿಸುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.


ಪಿಎಫ್ಐ ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಯೋತ್ಪಾದನೆ,ಬಾಂಬ್ ಸ್ಫೋಟ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪಿಎಫ್ಐ ಸಂಘಟನೆ ಸೇರಿದಂತೆ 1700 ಪ್ರಕರಣಗಳನ್ನು ಹಿಂಪಡೆದ ಪರಿಣಾಮವಾಗಿ ಸಮಾಜಘಾತುಕ ಶಕ್ತಿಗಳು ವಿಜೃಂಭಿಸಲು ಕಾರಣವಾಗಿದೆ ಎಂದರು. ದೇಶದ್ರೋಹಿ ಸಂಘಟನೆಗಳನ್ನು ನೀರೆರೆದು ಪೋಷಿಸಿದ ಸಿದ್ದರಾಮಯ್ಯನವರ ಸರ್ಕಾರ, ಇದೀಗ ದೇಶಭಕ್ತ ಸಂಘಟನೆಯಾದ ಬಜರಂಗದಳವನ್ನು ನಿಷೇಧಿಸಿ ಹಿಂದೂ ಸಮಾಜಕ್ಕೆ ಆಘಾತ ನೀಡಬೇಕು ಎನ್ನುವುದೇ ಎಂದು ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಆರೋಪಿಸಿದರು.


ಮೀಸಲಾತಿ ವಿಚಾರದಲ್ಲಿ ದಿಟ್ಟ ಹೆಜ್ಜೆಯಿಟ್ಟಿರುವ ನಮ್ಮ ಸರ್ಕಾರ ಜೇನುಗೂಡಿಗೆ ಕಲ್ಲು ಹೊಡೆದಿದೆ ಎನ್ನುತ್ತಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ಸಿಗೆ ಟಾಂಗ್ ನೀಡಿದ ಪೂಜಾರಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ ಒದಗಿಸುವುದೇ ಬಿಜೆಪಿಯ ಗುರಿಯಾಗಿದ್ದು ಜೇನುಗೂಡಿಗೆ ಕಲ್ಲು ಹೊಡೆದು ಜೇನನ್ನು ಜನಸಾಮಾನ್ಯರಿಗೆ ಹಂಚುವುದೇ ನಮ್ಮ ಉದ್ದೇಶವಾಗಿದೆ ಎಂದು ಮೀಸಲಾತಿ ವಿಚಾರವನ್ನು ಸಮರ್ಥಿಸಿಕೊಂಡರು.

ಪುತ್ತೂರಿನಲ್ಲಿ ಅರುಣ್ ಪುತ್ತಿಲ ಅವರಿಗೆ ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಿದ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡುತ್ತಿರುವ ಪಕ್ಷ,ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಲವಾರು ಮಾನದಂಡಗಳನ್ನು ಪರಿಗಣಿಸಿ ರಾಜ್ಯ ಕೋರ್ ಕಮಿಟಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ನೇತೃತ್ವದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದರು.


ಬಿಜೆಪಿ ಸೋಲಿನ ಭೀತಿಯಲ್ಲಿ ಕೇಂದ್ರ ನಾಯಕರನ್ನು ಕರೆಸುತ್ತಿದ್ದಾರೆ ಎನ್ನುವ ವಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ,ನಮ್ಮ ಸರ್ಕಾರದ ಸಾಧನೆಗಳೇ ನಮಗೆ ಶ್ರೀರಕ್ಷೆಯಾಗಿದೆ,ಈ ಹಿನ್ನೆಲೆಯಲ್ಲಿ ಮತದಾರರಿಗೆ ತಿಳಿಸುವುದು ನಮ್ಮ ನಾಯಕರ ಜವಾಬ್ದಾರಿಯಾಗಿದೆ, ನರೇಂದ್ರ ಮೋದಿ, ಯೋಗಿ ಆಗಮನದಿಂದ ಕಾರ್ಯಕರ್ತರಲ್ಲಿ ರಣೋತ್ಸಾಹ ಹೆಚ್ಚಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ನಾಯಕರಾದ ಮಣಿರಾಜ ಶೆಟ್ಟಿ, ಮಹಾವೀರ ಹೆಗ್ಡೆ, ನರಸಿಂಹ ಕಾಮತ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *