Share this news

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಪಡಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಸದರಿ ಕಾಯ್ದೆ ರದ್ದುಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವೆಂಕಟೇಶ್ ಸ್ಪಷ್ಟಪಡಿಸಿದ್ದಾಎ. ಆದರೆ ಈ ಉತ್ತರದಿಂದ ಸಮಾಧಾನಗೊಳ್ಳದ ರವಿಕುಮಾರ್, ಸಚಿವರು ಮೈಸೂರಿನಲ್ಲಿ ಎಮ್ಮೆ, ಕುರಿ ಕೊಲ್ಲಬಹುದಾದರೆ ಗೋವುಗಳನ್ನು ಯಾಕೆ ಕೊಲ್ಲಬಾರದು ಎಂದು ಹೇಳಿದ್ದಾರೆ. ಈ ರೀತಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಯ್ದೆಯನ್ನು ರದ್ದುಪಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಚಿವ ಕೆ.ವೆಂಕಟೇಶ್ ಅವರು ಮೈಸೂರಿನಲ್ಲಿ ಸಹಜವಾಗಿ ಆ ರೀತಿ ಹೇಳಿರುವುದು ನಿಜ. ಸದಸ್ಯರು ಕೇಳಿರುವ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಲಾಗಿದೆ ಎಂದಷ್ಟೇ ಹೇಳಿದರು. ಈ ಮಾತಿಗೆ ತೃಪ್ತಿಯಾಗದ ರವಿಕುಮಾರ್, ಇತ್ತೀಚೆಗೆ ನಡೆದ ಹಬ್ಬವೊಂದರಲ್ಲಿ ಸಾವಿರಾರು ಗೋವುಗಳನ್ನು ಕೊಲ್ಲಲಾಗಿದೆ. ಆದರೂ ಕಾಯ್ದೆ ಪ್ರಕಾರ ಯಾಕೆ ಅಂತವರ ವಿರುದ್ಧ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ. ಕಾಯ್ದೆ ಅನುಷ್ಠಾನ ಮಾಡದಿದ್ದರೆ ವಾಪಸ್ ಪಡೆಯುತ್ತೇವೆ ಎಂದಾದರೂ ಹೇಳಬೇಕು. ಸಚಿವರ ಉತ್ತರದಲ್ಲಿ ದ್ವಂದ್ವವಿದೆ ಎಂದು ಸಭಾಪತಿಯವರ ಪೀಠದ ಮುಂದೆ ಆಗಮಿಸಿ ಧರಣಿ ಆರಂಭಿಸಿದರು.

ಇದಕ್ಕೆ ಬಿಜೆಪಿಯ ಉಳಿದ ಸದಸ್ಯರು ಬೆಂಬಲಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಈ ಮಧ್ಯೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲು ಅದಕ್ಕೆ ಬಿಜೆಪಿಯವರು ಉತ್ತರ ನೀಡಿ ಎಂದು ಚುಚ್ಚಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮತಕ್ಕಾಗಿ ಗೋವುಗಳ ಹೆಸರಿನಲ್ಲಿ ಬಿಜೆಪಿ ಸದಸ್ಯರು ರಾಜಕೀಯ ಮಾಡುತ್ತಿದ್ದಾರೆ. ಅಮೂಲ್ಯವಾದ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ಮಧ್ಯೆ ಜೆಡಿಎಸ್ ಸದಸ್ಯ ಮರಿತಿಬ್ಬೆಗೌಡ ಅವರು ಸಚಿವರು ಇದೇ ರೀತಿ ಉತ್ತರ ಕೊಡಬೇಕೆಂದು ಒತ್ತಾಯಿಸುವುದು ಸರಿಯಲ್ಲ ಎಂದು ಹೇಳಿದಾಗ, ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರು ತೀವ್ರ ಆಕ್ಷೆಪ ವ್ಯಕ್ತಪಡಿಸಿ ವಾಗ್ವಾದಕ್ಕೆ ಇಳಿದರು. ಸಚಿವರಾದ ಸಂತೋಷ್ ಲಾಡ್, ಆರ್.ಬಿ.ತಿಮ್ಮಾಪುರ, ಡಾ.ಎಂ.ಸಿ.ಸುಧಾಕರ್, ಸದಸ್ಯ ಯು.ಬಿ. ವೆಂಕಟೇಶ್ ಮುಂತಾದವರು ಬಿಜೆಪಿಯ ಧರಣಿಯನ್ನು ಖಂಡಿಸಿದರು. ಕೊನೆಗೆ ಸಭಾಪತಿ ಬಸವರಾಜ ಹೊರಟ್ಟಿಅವರ ಸಲಹೆ ಮೇರೆಗೆ ಸಚಿವರು ಗೋ ಹತ್ಯೆ ಮಾಡಿರುವ ಬಗ್ಗೆ ದೂರುಗಳು ಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೂ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದಾಗ ಸಭಾಪತಿಗಳು ಗದ್ದಲದ ನಡುವೆ ಶೂನ್ಯವೇಳೆ, ಸೇರಿದಂತೆ ಮುಂದಿನ ಕಲಾಪ ಮುಗಿಸಿ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

Leave a Reply

Your email address will not be published. Required fields are marked *