ಮೈಸೂರು: ಆಫ್ರಿಕನ್ ಫೀವರ್, ಹಕ್ಕಿ ಜ್ವರದ ಭೀತಿ, ಕೊರೊನಾ ಸಂದರ್ಭದಲ್ಲಿ ದೊಡ್ಡ ಆತಂಕ ಸೃಷ್ಟಿ ಮಾಡಿದ್ದ ಕೇರಳದಿಂದ ಇದೀಗ ರಾಜ್ಯಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಕೇರಳದಲ್ಲಿ ನಿಫಾ ವೈರಸ್ ಹೆಚ್ಚಾಗಿರುವುದರಿಂದ ರಾಜ್ಯ ಗಡಿ ಭಾಗಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರ್ನಾಟಕ ಕೇರಳ ಗಡಿ ಪ್ರದೇಶಕ್ಕೆ ಹೆಚ್.ಡಿ.ಕೋಟೆ ತಹಶೀಲ್ದಾರ್ ಸಣ್ಣ ರಾಮಪ್ಪ ಹಾಘೂ ತಾಲೂಕು ಆರೋಗ್ಯಧಿಕಾರಿ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಫಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸಿ, ಹಾಗೂ ಜನರಿಗೆ ಜಾಗೃತಿ ಮೂಡಿಸಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು. ಸದ್ಯ ಗಡಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವಾಹನ ಸವಾರರಿಗೆ ಥರ್ಮಲ್ ಸ್ಕ್ಯಾನ್ ಮಾಡುತ್ತಿದ್ದಾರೆ.ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ನಿಗಾ ಇಡಲಾಗುತ್ತಿದೆ. ಈವರೆಗೆ ರಾಜ್ಯದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದ್ದರಿಂದ ಯಾರೂ ಗಾಬರಿಯಾಗಬೇಕಿಲ್ಲ. ಆದರೆ ಎಚ್ಚರಿಕೆ ವಹಿಸಿ ಎಂದು ಆರೋಗ್ಯಧಿಕಾರಿ ಸೂಚನೆ ನೀಡಿದ್ದಾರೆ.
ಕೇರಳ ರಾಜ್ಯದಲ್ಲಿ ದಿನೇ ದಿನೇ ನಿಫಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈಗಾಗಲೇ ನಿಫಾ ವೈರಸ್ ಇಬ್ಬರು ಬಲಿಯಾಗಿದ್ದಾರೆ. ಹೀಗಾಗಿ ಕೇರಳ ಹಾಗೂ ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇರಳ ಕರ್ನಾಟಕ ಗಡಿಭಾಗವಾದ ಬಾವಲಿ ಚೆಕ್ ಪೋಸ್ಟ್ ನಲ್ಲಿ ಈಗಾಗಲೇ ಆರೋಗ್ಯ ಇಲಾಖೆ ಕೇರಳದಿಂದ ರಾಜ್ಯಕ್ಕೆ ಬರುವ ಪ್ರತಿಯೊಬ್ಬರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಎಲ್ಲಾ ವಾಹನಗಳನ್ನ ತಪಾಸಣೆ ಮಾಡುತ್ತಿರುವ ಆರೋಗ್ಯ ಇಲಾಖೆ ಪ್ರತಿಯೊಬ್ಬರ ಮಾಹಿತಿಯನ್ನ ಸಂಗ್ರಹಣೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರನ್ನ ಥರ್ಮಲ್ ಸ್ಕ್ಯಾನ್ ಮಾಡುವ ಮೂಲಕ ಪರೀಕ್ಷೆ ಸಹ ನಡೆಸುತ್ತಿದ್ದಾರೆ. ನಿಫಾ ವೈರಸ್ ನ ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಅವರನ್ನ ಐಸೋಲೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಕೇರಳದಿಂದ ಬಂದು ಕಾಡಾಂಚಿನ ಗ್ರಾಮಗಳಲ್ಲಿ ಯಾರಾದರೂ ವಾಸ್ತವ್ಯ ಹೂಡಿದರೆ ಅವರ ಮಾಹಿತಿ ನೀಡುವಂತೆ ಜನರಲ್ಲಿ ಮನವಿ ಮಾಡಲಾಗಿದೆ.