Share this news

ಬೆಂಗಳೂರು: ರಾಜ್ಯದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತತ್ತರಿಸಿಹೋಗಿದ್ದಾರೆ. ಇನ್ನು ಬೇಳೆ ಕಾಳುಗಳ ಬೆಲೆ ಏರಿಕೆ ಆಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ನಾಫೆಡ್ ಮತ್ತು ಎನ್‌ಸಿಸಿಎಫ್ ಸಂಸ್ಥೆಗಳಲ್ಲಿರುವ ಬೇಳೆ ಕಾಳುಗಳ ದಾಸ್ತಾನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೆಲೆ ಏರಿಕೆಯ ಹೊರೆಯನ್ನು ಇಳಿಕೆ ಮಾಡಲು ಮುಂದಾಗಿದೆ.

ಜನಸಾಮಾನ್ಯರಿಗೆ ಸರ್ಕಾರದಿಂದ ಯಾವುದೇ ಉಚಿತ ಯೋಜನೆಗಳನ್ನು ಕೊಡದಿದ್ದರೂ ಪರವಾಗಿಲ್ಲ, ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗದಂತೆ ನಿಯಂತ್ರಣ ಮಾಡಿದರೆ ಸಾಕು ಎನ್ನುವಂತಾಗಿದೆ. ದಿನಬಳಕೆ ವಸ್ತುಗಳಾದ ತರಕಾರಿ, ಹಣ್ಣುಗಳು, ಅಕ್ಕಿ, ಬೇಳೆ ಕಾಳುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. ಕಳೆದ 20 ದಿನಗಳ ಹಿಂದಿನ ಬೆಲೆಗೂ ಈಗಿರುವ ಬೆಲೆಗೂ ಶೆ.30 ರಿಂದ ಶೇ.50ರಷ್ಟು ಬೆಲೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಜನಸಮಾನ್ಯರು ಬೆಲೆ ಏರಿಕೆ ಬಿಸಿ ಅನುಭವಿಸುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರವೂ ಕೂಡ ವಿದ್ಯುತ್ ದರ ಏರಿಕೆ ಮಾಡಿ ಮತ್ತೊಂದು ಹೊಡೆತವನ್ನು ನೀಡಿದೆ.

ತೊಗರಿ ಬೇಳೆ ಸೇರಿದಂತೆ ಅನೇಕ ಬೇಳೆ ಕಾಳುಗಳ ಬೆಲೆ ಏರಿಕೆಯು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿಯೇ ದರ ಏರಿಕೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಹಾಗೂ ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಬಳಿ ದಾಸ್ತಾನು ಇರುವ ಬೇಳೆ ಕಾಳುಗಳನ್ನು ವಾಣಿಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಬೇಳೆ ಕಾಳುಗಳ ಪೂರೈಕೆಯನ್ನು ಹೆಚ್ಚಳ ಮಾಡುವ ಮೂಲಕ ಬೆಲೆಯನ್ನು ಇಳಿಕೆ ಮಾಡಲು ತೀರ್ಮಾನ ಕೈಗೊಂಡಿದೆ.

ಇನ್ನು ರಾಜ್ಯದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳು ಸೇರಿದಂತೆ ಪ್ರತಿ ಜಿಲ್ಲೆಯಲ್ಲೂ ಬೇಳೆಗಳ ದರ ಹೆಚ್ಚಾಗಿವೆ. ಬೇಳೆ ಕಾಲುಗಳ ಬೆಲೆ ಜಾಸ್ತಿಯಾದರೆ ಜೀವನ ಮಾಡುವುದು ತುಂಬಾ ಕಷ್ಟ ಎಂದು ಗ್ರಾಹಕರು ಹೇಳುತ್ತಿದ್ದಾರೆ. ಇನ್ನು ವ್ಯಾಪಾರ ವಹಿವಾಟು ಕೂಡ ಕಷ್ಟವಾಗಲಿದೆ ಎಂದು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ.

 

Leave a Reply

Your email address will not be published. Required fields are marked *