ಬಾಗಲಕೋಟೆ: ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ರಾಜ್ಯದಲ್ಲಿ ಕೆಲವು ಶಾಸಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ಒಂದುವೇಳೆ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪವಾದರೆ ಅದು ಹೈಕಮಾಂಡ್ ಗೆ ಬಿಟ್ಟವಿಚಾರ ಎಂದು ಬಾಗಲಕೋಟೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಶಾಸಕರು ಸುಮ್ಮನೆ ಅವರವರ ನಾಯಕರ ಅಭಿಮಾನಕ್ಕೆ ಮಾತನಾಡುತ್ತಾರೆ. ಅದು ಅವರ ವೈಯಕ್ತಿಕ ಹೇಳಿಕೆಯೇ ಹೊರತು ಪಕ್ಷದ ತೀರ್ಮಾನವಲ್ಲ, ಪಕ್ಷದ ನಿರ್ಣಯವೇ ಬೇರೆ ಇರುತ್ತದೆ. ಏನೇ ನಿರ್ಣಯ ಆಗಬೇಕಾದರೂ ರಾಷ್ಟ್ರೀಯ ಅಧ್ಯಕ್ಷರು ಹಾಗೂ ನಾಯಕರು ಈ ಕುರಿತು ತಿರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ನಮ್ಮ ವರಿಷ್ಠರು ಏನು ತೀರ್ಮಾನ ಮಾಡುತ್ತಾರೆ ಅದಕ್ಕೆ ನಾವು ಬದ್ಧರಾಗಿದ್ದೇವೆ. ಸಿದ್ದರಾಮಯ್ಯ ಮೇಲೆ ಪ್ರೀತಿ ಇದ್ದವರು ಅವರ ಪರ ಮಾತನಾಡುತ್ತಾರೆ. ಡಿಕೆ ಶಿವಕುಮಾರ್ ಮೇಲೆ ಪ್ರೀತಿ ಇದ್ದವರು ಅವರ ಪರ ಮಾತನಾಡುತ್ತಾರೆ. ಆದರೆ ಅಂತಿಮ ನಿರ್ಣಯ ನಮ್ಮ ಹೈಕಮಾಂಡ್ ಎಂದು ವಿಜಯಾನಂದ ಕಾಶಪ್ಪನವರ ಹೇಳಿದರು. ಹೈಕಮಾಂಡ್ ನಿರ್ಣಯ ಪಾಲಿಸಲು ನಾವೆಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದರು.


















