Share this news

ಬೆಂಗಳೂರು : ರಾಜ್ಯದಲ್ಲಿ ಉಷ್ಣ ಮಾರುತ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಸಿಲ ಬೇಗೆಯಿಂದ ಉಂಟಾಗಬಹುದಾದ ಸನ್‌ ಸ್ಟೊ್ರೕಕ್‌, ಹೀಟ್‌ ಸ್ಟೊ್ರೕಕ್‌ನಂತಹ ಅಪಾಯಗಳಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.

ಈ ಬಗ್ಗೆ ಸಾರ್ವಜನಿಕರಿಗೆ ಮಾತ್ರವಲ್ಲದೆ ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳಿಗೂ ಪ್ರತ್ಯೇಕ ಮಾರ್ಗಸೂಚಿ ನೀಡಿದ್ದು, ಆಯಾ ಜಿಲ್ಲೆ ಹಾಗೂ ಪಾಲಿಕೆಗಳ ವ್ಯಾಪ್ತಿಗಳ ಜನರಿಗೆ ಉಷ್ಣ ಮಾರುತಗಳಿಂದ ರಕ್ಷಣೆ ಪಡೆಯಲು ಅಗತ್ಯ ವ್ಯವಸ್ಥೆ ಮಾಡುವಂತೆ ಸೂಚಿಸಿದೆ.

ನವಜಾತ ಶಿಶುಗಳು, ಪುಟ್ಟಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಅನಾರೋಗ್ಯ ಸಮಸ್ಯೆಗಳಿರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಲಾಗಿದೆ. ಜತೆಗೆ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರು ಹಾಗೂ ಮಾಲೀಕರಿಗೂ ಮಾರ್ಗಸೂಚಿ ನೀಡಿದ್ದು, ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯ ಸಂರಕ್ಷಣೆಗಾಗಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಮಾಲೀಕರಿಗೆ ನಿರ್ದೇಶನ ನೀಡಲಾಗಿದೆ.

ಕಾರ್ಮಿಕರು ಪ್ರತಿ 20 ನಿಮಿಷಗಳಿಗೊಮ್ಮೆ ಗ್ಲಾಸು ನೀರು ಕುಡಿಯಬೇಕು. ಪ್ರತಿ 1 ಗಂಟೆಯ ಕೆಲಸಕ್ಕೆ 5 ನಿಮಿಷ ಬಿಡುವು ನೀಡಬೇಕು. ಕೆಲಸಗಾರರಿಗೆ ನೆರಳಿಗಾಗಿ ತಾತ್ಕಾಲಿಕ ಶೆಡ್‌ ವ್ಯವಸ್ಥೆ ಮಾಡಬೇಕು. ಗರ್ಭಿಣಿಯರು, ವೃದ್ಧರಿಗೆ ಕೆಲಸ ಮಾಡಲು ಆಗುತ್ತದೆಯೇ ಎಂಬುದನ್ನು ಮೊದಲೇ ಪರೀಕ್ಷಿಸಿಕೊಳ್ಳಬೇಕು ಎಂಬಿತ್ಯಾದಿ ನಿರ್ದೇಶನಗಳನ್ನು ನೀಡಲಾಗಿದೆ.

ಮಕ್ಕಳಲ್ಲಿ Heat stroke  ಉಂಟಾದರೆ ಆಹಾರ ಸೇವಿಸಲು ನಿರಾಕರಿಸುವುದು, ಅತಿಯಾಗಿ ಸಿಡಿಮಿಡಿಗೊಳ್ಳುವುದು, ಕನಿಷ್ಠ ಮೂತ್ರ ವಿಸರ್ಜನೆ, ಬಾಯಿ ಒಣಗುವಿಕೆ ಹಾಗೂ ಗುಳಿ ಬಿದ್ದ ಕಣ್ಣುಗಳು, ಆಲಸ್ಯ, ಅರೆ ಪ್ರಜ್ಞಾವಸ್ಥೆ, ಮೂರ್ಛೆ ಹೋಗುವುದು, ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ಉಂಟಾಗುವುದು ಆಗಬಹುದು.

ವಯಸ್ಕರಲ್ಲಿ ಅರೆ ಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ಕೋಮಾ ಸ್ಥತಿ ತಲುಪುವುದು, ಬಿಸಿ ಹಾಗೂ ಕೆಂಪಾದ ಒಣ ಚರ್ಮ, ಅತಿಯಾದ ತಲೆ ನೋವು, ಮಾಂಸ ಖಂಡಗಳಲ್ಲಿ ಸುಸ್ತು, ವಾಂತಿ, ಹೃದಯ ಬಡಿತ ಹೆಚ್ಚಾಗುವುದು ಆಗುತ್ತದೆ.

ತಕ್ಷಣ ಏನು ಮಾಡಬೇಕು?:

ಹೀಟ್‌ ಸ್ಟೊ್ರೕಕ್‌ ಆದಾಗ ತಕ್ಷಣ ವ್ಯಕ್ತಿಯನ್ನು ತಣ್ಣಗಿನ ಪ್ರದೇಶಕ್ಕೆ ಕರೆದೊಯ್ದು, ದೇಹ ಹಾಗೂ ಬಟ್ಟೆಮೇಲೆ ತಣ್ಣಗಿನ ನೀರು ಹಾಕಬೇಕು. ವ್ಯಕ್ತಿಗೆ ಹೆಚ್ಚು ಗಾಳಿ ಆಡಲು ಅವಕಾಶ ಮಾಡಿಕೊಡಬೇಕು. ಜತೆಗೆ 108ಗೆ ಕರೆ ಮಾಡಬೇಕು.

ಸಾರ್ವಜನಿಕರು ಏನು ಮಾಡಬೇಕು?

  • ಉಷ್ಣ ಮಾರುತದಿಂದ ರಕ್ಷಿಸಿಕೊಳ್ಳಲು ಹೆಚ್ಚು ನೀರು ಕುಡಿಯಬೇಕು
  • ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮ
  • ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್‌, ಸೌತೆಕಾಯಿ, ಎಳೆನೀರು ಸೇವಿಸಬೇಕು
  • ತಿಳಿಬಣ್ಣದ, ಮೈಗೆ ಅಂಟದ ಹತ್ತಿ ಬಟ್ಟೆಧರಿಸಬೇಕು. ನೆರಳಿಗೆ ಟೋಪಿ, ಛತ್ರಿಯಂತಹ ಆಯ್ಕೆಗಳನ್ನು ಇಟ್ಟುಕೊಳ್ಳಬೇಕು
  • ಹಗಲಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ.

ಏನು ಮಾಡಬಾರದು?

  • ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಹೊರ ಹೋಗುವುದನ್ನು ತಪ್ಪಿಸಬೇಕು
  • ಮಕ್ಕಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬಾರದು
  • ಮಧ್ಯಾಹ್ನದ ವೇಳೆ ಅಡುಗೆ ಸಿದ್ಧಪಡಿಸುವುದನ್ನು ತಪ್ಪಿಸಬೇಕು
  • ಮಧ್ಯಾಹ್ನ ಕಾಫಿ, ಟೀ, ಕಾರ್ಬೊನೇಟೆಡ್‌ ಪಾನೀಯ ಸೇವಿಸಬೇಡಿ
  • ಚಪ್ಪಲಿ, ಛತ್ರಿಯಂತಹ ಸುರಕ್ಷತೆ ಇಲ್ಲದೆ ಬಿಸಿಲಿನಲ್ಲಿ ಓಡಾಡಬಾರದು

 

Leave a Reply

Your email address will not be published. Required fields are marked *