ಬೆಂಗಳೂರು : ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ನಡೆಸಿದ ಅಧ್ಯಯನದ ಆಧಾರದ ಮೇಲೆ ರಾಜ್ಯದಲ್ಲಿ 16,000ಕ್ಕೂ ಹೆಚ್ಚು ವೈದ್ಯಕೀಯ ವೃತ್ತಿಪರರ ಕೊರತೆ ಇದೆ ವರದಿಯಾಗಿದ್ದು, ಈ ಸಂಬಂಧ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಎಫ್ಐಸಿಸಿಐ ನಡೆಸಿದ ಅಧ್ಯಯನದ ವರದಿಯನ್ನು ಆಧರಿಸಿ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಕರ್ನಾಟಕದಲ್ಲಿ ಆರೋಗ್ಯ ಸೇವೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಸಂಕಷ್ಟದಲ್ಲಿದ್ದು, ಸಾಂಕ್ರಾಮಿಕ ರೋಗಗಳ ಆತಂಕಕಾರಿ ಏರಿಕೆಯೊಂದಿಗೆ, ಕಡಿಮೆ ಸಿಬ್ಬಂದಿ ಮತ್ತು ರೋಗಿಗಳ ಹೆಚ್ಚಳವನ್ನು ನಿಭಾಯಿಸಲು ಆರೋಗ್ಯ ಇಲಾಖೆ ಅಸಮರ್ಥವಾಗಿದೆ ಎಂದು ಪಿಐಎಲ್ ಹೇಳಿದೆ.
FICCI ಕಳೆದ ವರ್ಷ ಅಕ್ಟೋಬರ್ 11 ರಂದು ಕರ್ನಾಟಕದ ವಿಷನ್ 1 ಅಡಿ ಟ್ರಿಲಿಯನ್ ಆರ್ಥಿಕತೆ ವರದಿ ಬಿಡುಗಡೆ ಮಾಡಿತ್ತು. ಈ ವರದಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 454 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ 723 ಎಂಬಿಬಿಎಸ್ ವೈದ್ಯರು, 7,492 ದಾದಿಯರು, 1,517 ಲ್ಯಾಬ್ ತಂತ್ರಜ್ಞರು, 1,512 ಫಾರ್ಮಸಿಸ್ಟ್ಗಳು, 1,752 ಅಟೆಂಡೆಂಟ್ಗಳು ಮತ್ತು 3,253 ಗ್ರೂಪ್ ಡಿ ಸಿಬ್ಬಂದಿ ಕೊರತೆ ಇದೆ ಎಂದು ವರದಿ ಉಲ್ಲೇಖಿಸಿದೆ.ಈ ವರದಿಯಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಹೀಗಾಗಿ ಪಿಐಎಲ್ ದಾಖಲಿಸಿಕೊಂಡು ನ್ಯಾಯಾಲಯದ ಮುಂದೆ ಪಟ್ಟಿ ಮಾಡುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ನಿರ್ದೇಶನ ನೀಡಿತ್ತು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ