ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಗಳಾಗಿ ಸೇವೆ ಸಲ್ಲಿಸುತ್ತಿರುವ 35 ಪೊಲೀಸ್ ಅಧಿಕಾರಿಗಳನ್ನು ಎಸ್ಪಿಗಳಾಗಿ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ವಿಭಾಗದಲ್ಲಿ ಡಿವೈಎಸ್ಪಿ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 35 ಅಧಿಕಾರಿಗಳಿಗೆ ಕೆಸಿಎಸ್ ನಿಯಮ 32ರಡಿ ಸಿವಿಲ್ ಎಸ್ಪಿ ನಾನ್- ಐಪಿಎಸ್ ವೃಂದಕ್ಕೆ ಸ್ವತಂತ್ರ ಪ್ರಭಾರದಲ್ಲಿರಿಸಿ, ಮುಂಬಡ್ತಿ ನೀಡಿ ಆದೇಶಿಸಲಾಗಿದೆ.
ರಾಜ್ಯ ಗುಪ್ತವಾರ್ತೆಯ ಡಿವೈಎಸ್ಪಿಯಾಗಿರುವ ಚಂದ್ರಕಾಂತ ಪೂಜಾರಿ ಅವರನ್ನು ಬೀದರ್ ಹೆಚ್ಚುವರಿ ಪೊಲೀಸ್ ಅಧೀಕ್ಷರನ್ನಾಗಿ ನೇಮಿಸಿ ಮುಂಬಡ್ತಿ ನೀಡಿದೆ. ಬೆಂಗಳೂರು ನಗರ ಸಿಸಿಬಿ ಡಿವೈಎಸ್ಪಿ ಮಂಜುನಾಥ ಚೌದರಿಯನ್ನು ಬಳ್ಳಾರಿ ವಲಯ ಗುಪ್ತವಾರ್ತೆಯ ಪೊಲೀಸ್ ಅಧೀಕ್ಷಕರನ್ನಾಗಿ ನೇಮಿಸಿದೆ.
ನಾಗೇಶ್ ಐತಾಳ್ ಯು ಅವರನ್ನು ಕಲಬುರ್ಗಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ, ಹೇಮಂತ್ ಕುಮಾರ್ ಆರ್ ಅವರನ್ನು ಕೊಪ್ಪಳ ಜಿಲ್ಲೆಗೆ, ಮಹಾಂತೇಶ್ವರ ಎಸ್ ಜಿದ್ದಿ ಅವರನ್ನು ಬಾಗಲಕೋಟೆ ಜಿಲ್ಲೆಗೆ ನಾನ್ ಐಪಿಎಸ್ ಸಿವಿಲ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಆಗಿ ನೇಮಿಸಲಾಗಿದೆ.
ಮಂಗಳೂರು ಸಿಸಿಬಿ ಡಿವೈಎಸ್ಪಿ ಪರಮೇಶ್ವರ ಹೆಗಡೆ ಅವರನ್ನು ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷರನ್ನಾಗಿ ನೇಮಿಸಲಾಗಿದೆ.
ಲೋಕಾಯುಕ್ತ ಡಿವೈಎಸ್ಪಿ ರಾಜೇಂದ್ರ ಡಿ.ಎಸ್ ಅವರನ್ನು ದಕ್ಷಿಣ ಕನ್ನಡ ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ ನೇಮಿಸಲಾಗಿದೆ.
ಹೀಗೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್ಪಿಗಳಿಗೆ ಪ್ರಮೋಶನ್ ಸಿಕ್ಕಿದ್ದು ಆಡಳಿತ ಯಂತ್ರಕ್ಕೆ ವೇಗ ಸಿಕ್ಕಂತಾಗಿದೆ.