Share this news

ಬೆಂಗಳೂರು: ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಬಿತ್ತನೆ ಮಾಡಿದ ಬೀಜ ಮೊಳಕೆ ಬರು ಮೊದಲೇ ಮಳೆ ಕೈಕೊಟ್ಟಿದೆ. ಕೊಂಚ ಬೇಗ ಬಿತ್ತನೆ ಮಾಡಿದ ಹೊಲ, ಗದ್ದೆಗಳಲ್ಲಿ ಅಲ್ಪಸ್ವಲ್ಪ ಬೆಳೆ ಬಂದರೂ, ಮಳೆ ಇಲ್ಲದೇ ನೀರಿನ ಅಭಾವದಿಂದ ಸೊರಗುತ್ತಿದೆ.. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆ ಮೇಲೆ ಭಾರಿ ಪರಿಣಾಮ ಬೀರುವ ಅಪಾಯವಿದೆ.

ಈ ಬಾರಿ ಜೂನ್‌ನಲ್ಲಿ ಮುಂಗಾರು ತಡವಾಗಿ ಆರಂಭವಾಗಿ ಬಳಿಕ ಜೂನ್‌ನಲ್ಲಿ ಮಳೆ ಬಂದರೂ ಕೃಷಿ ಚಟುವಟಿಕೆಗಳಿಗೆ ಬೇಕಾಗುವಷ್ಟು ಮಳೆಯಾಗಲಿಲ್ಲ. ಈಗ ಸುಮಾರು ಒಂದೂವರೆ ತಿಂಗಳಿAದ ಹಲವೆಡೆ ಒಂದು ಹನಿಯೂ ಮಳೆ ಬಾರದೆ ಬೆಳೆ ಒಣಗುತ್ತಿದೆ. ಹಲವರು ಮಳೆಯಿಲ್ಲದೆ ಬಿತ್ತನೆಯನ್ನೂ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಕ್ಕೂ ಹೆಚ್ಚು ತಾಲೂಕುಗಳಲ್ಲಿ ತೀವ್ರ ಮಳೆಯ ಕೊರತೆ ಉಂಟಾಗಿದೆ. ಈಗ ಅತಿಯಾದ ಬಿಸಿಲಿನಿಂದಾಗಿ ಬೇಸಿಗೆಯಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಲ್ಪಸ್ವಲ್ಪ ಬಂದಿರುವ ಬೆಳೆಯೂ ಒಣಗಿದೆ.

ರಾಜ್ಯದ ಬರ ಪೀಡಿತ ಜಿಲ್ಲೆಗಳ ಕುರಿತು ಅಲ್ಲಿನ ಬೆಳೆ, ವಾತಾವರಣದ ಆಧಾರದ ಮೇಲೆ ಕಂದಾಯ ಇಲಾಖೆಯ ನೇತೃತ್ವದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಸಮೀಕ್ಷೆ ನಡೆಸುತ್ತಿವೆ. ಮುಂದಿನ ವಾರದಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ. ಈ ಬಾರಿ ಶೇ.80ರಷ್ಟು ಬಿತ್ತನೆಯಾಗಿದೆ. ಇದರಲ್ಲಿ ಶೇ.40ರಷ್ಟು ಬೆಳೆ ಮೊಳಕೆಯೊಡೆಯುವ ಮೊದಲೇ ಹಾಳಾಗಿದೆ. ಉಳಿದ ಶೇ.40 ರಲ್ಲಿ ಅಲ್ಪಸ್ವಲ್ಪ ಬಂದಿದೆ. ಅದೂ ಈಗ ಅತಿಯಾದ ಬಿಸಿಲಿನಿಂದ ಒಣಗಿದೆ. ಹೀಗಾಗಿ, ಈ ಬಾರಿ ಕೃಷಿ ಉತ್ಪನ್ನಗಳ ಉತ್ಪಾದನೆ ಗಣನೀಯವಾಗಿ ಕುಂಠಿತವಾಗಲಿದೆ.

ಜೂನ್ 1 ರಿಂದ ಆಗಸ್ಟ್ 25ರವರೆಗೆ ಸಾಮಾನ್ಯ ಮಳೆ 660 ಮಿ.ಮೀ. ಪ್ರತಿಯಾಗಿ ವಾಸ್ತವಿಕ ಸರಾಸರಿ 488 ಮಿ.ಮೀ. ಮಳೆಯಾಗಿದೆ. ಶೇ.26 ರಷ್ಟು ಮಳೆ ಕೊರತೆಯಿದೆ. ಒಟ್ಟಾರೆ ಮಳೆ (ಜನವರಿ 1ರಿಂದ – ಆಗಸ್ಟ್ 25ರವರೆಗೆ) ಸಾಮಾನ್ಯವಾಗಿ 779 ಮಿ.ಮೀ. ಮಳೆಯಾಗುತ್ತಿದ್ದು, ಈ ಬಾರಿ ಸರಾಸರಿ 605 ಮಿ.ಮೀ. ಮಳೆಯಾಗಿದೆ. ಅಂದರೆ ಶೇ.22ರಷ್ಟು ಮಳೆ ಕೊರತೆ ಉಂಟಾಗಿದೆ.

Leave a Reply

Your email address will not be published. Required fields are marked *