ಬೆಂಗಳೂರು: ಕಾಂಗ್ರೆಸ್‌ನ ಆಪರೇಷನ್ ಹಸ್ತ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ಮತ್ತು ಜೆಡಿಎಸ್‌ನ ಕೆಲ ನಾಯಕರು ಘರವಾಪಸಿ ಮಾಡುತ್ತಾರೆ ಎಂಬ ವಂದತಿ ಹರಡಿದೆ.
ಕಳೆದ ವಿಧಾನಸಭೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ, ಮಾಜಿ ಶಾಸಕ ಎಸ್‌ಐ ಚಿಕ್ಕನಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಗಾಳ ಹಾಕಿದ್ದು, ಇದು ಬಹುತೇಕ ಯಶಸ್ವಿಯಾಗಿದೆ. ಈ ನಡುವೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶೆಟ್ಟರ್‌ಗೆ ಕರೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ನಿನ್ನೆ (ಆ.25) ಸಂಜೆ ಅಮಿತ್ ಶಾ ಶೆಟ್ಟರ್‌ಗೆ ಕರೆ ಮಾಡಿದ್ದು, ಮನವೊಲಿಸಲು ಯತ್ನಿಸಿದ್ದಾರೆ ಎಂದು ಶೆಟ್ಟರ್ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಏಳೆಂಟು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ಪಕ್ಷ ಬಿಟ್ಟು ಹೋದ ನಾಯಕರ ಮನವೊಲಿಕೆಗೆ ಬಿಜೆಪಿ ಕೇಂದ್ರ ನಾಯಕರೇ ಮುಂದಾಗಿದ್ದಾರೆ. ಇತ್ತೀಚಿಗೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಜಗದೀಶ್ ಶೆಟ್ಟರ್ ಮತ್ತು ಶಾಸಕ ಲಕ್ಷ್ಮಣ ಸವದಿ ಅವರಿಗೆ ಪರೋಕ್ಷವಾಗಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು.
ಯಾರೇ ಪಕ್ಷ ಬಿಟ್ಟಿದ್ದರು ಅವರಿಗೆ ಪ್ರಧಾನಿ ಮೋದಿಗಾಗಿ ಸ್ವಾಗತವಿದೆ. ಪಕ್ಷ ಬಿಟ್ಟವರ ಜೊತೆ ಸದ್ಯಕ್ಕೆ ಯಾವುದೇ ಮಾತುಕತೆ ನಡೆದಿಲ್ಲ. ಮೋದಿಯಂತ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ನಮ್ಮ ದೇಶದ ನಾಯಕನನ್ನು ಇಂದು ಪ್ರಪಂಚ ಒಪ್ಪುತ್ತಿದೆ. ಅವರನ್ನು ಮತ್ತೆ ಪ್ರಧಾನಿ ಮಾಡಲು ಯಾರೇ ಪಾರ್ಟಿ ಬಿಟ್ಟಿದ್ದರೂ ವಾಪಸ್ ಬರಲು ವಿನಂತಿ ಮಾಡುತ್ತೇನೆ ಎಂದಿದ್ದರು.