Share this news

ಬೆಂಗಳೂರು:ರಾಜ್ಯದಲ್ಲಿ ಬರದಿಂದ ಕಂಗೆಟ್ಟ ರೈತರಿಗೆ ಸಿಎಂ ಅಭಯ ನೀಡಿದ್ದು, ಮೊದಲ ಕಂತಿನಲ್ಲಿ ರೂ.2,000ವರೆಗೆ ಬೆಳೆ ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು
ಸುದ್ದಿಗೋಷ್ಠಿಯಲ್ಲಿ ಬರಪರಿಹಾರದ ಘೋಷಣೆ ಮಾಡಿದರು. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರಕ್ಕೆ ಬರೆದ ಪತ್ರಗಳಿಗೂ ಪ್ರತಿಕ್ರಿಯೆ ಇಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ.ಉದ್ಯೋಗ ಖಾತರಿ ಯೋಜನೆಯಡಿ 150 ಮಾನವ ದಿನ ಉದ್ಯೋಗ ಕೊಡಲು ಅನುಮತಿ ಕೋರಲಾಗಿತ್ತು. ಕೇಂದ್ರ ಇನ್ನೂ ಅನುಮತಿ ನೀಡಿಲ್ಲ ಎಂದು ಆರೋಪಿಸಿದರು.

ಈಗ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ ರೂ. 2,000 ರೂವರೆಗೆ ಬೆಳೆ ಪರಿಹಾರ ಹಣ ನೀಡಲು ನಿರ್ಧರಿಸಿದ್ದೇವೆ. ಕೇಂದ್ರದಿಂದ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ ಎನ್ನುವ ಕಾರಣದಿಂದ ರಾಜ್ಯ ಸರ್ಕಾರ ಮೊದಲ ಕಂತು ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಿದ್ದೇವೆ‌.48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. 18171.44 ಕೋಟಿ ಪರಿಹಾರದ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ನಮ್ಮ ತೆರಿಗೆ ಹಣದ ಪಾಲನ್ನು ನಮಗೆ ವಾಪಾಸ್ ಕೊಟ್ಟರೂ ಸಾಕು ಎಂದರು.

ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲದ ಸ್ಥಿತಿ ಇದೆ. ರೂ. 4, 663 ಕೋಟಿ ಬೆಳೆ ನಷ್ಟ ಪರಿಹಾರ ಕೇಂದ್ರಕ್ಕೆ ಕೇಳಿದ್ದೆವು. ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಇವತ್ತಿನವರೆಗೂ ಕೇಂದ್ರ ಸಭೆಯನ್ನೇ ನಡೆಸಿಲ್ಲ. ಸಮಯ ಕೇಳಿದರೂ ಭೇಟಿಗೆ ಅವಕಾಶ ಕೊಟ್ಟಿಲ್ಲ. ಹಣಕಾಸು ಸಚಿವರನ್ನು ನಮ್ಮ ಸಚಿವರು ಭೇಟಿ ಮಾಡಿದಾರೆ. ಕೇಂದ್ರ ಇವತ್ತಿನವರೆಗೆ ಸಭೆ ನಡೆಸಿಲ್ಲ. ಪರಿಹಾರ ನೀಡುವ‌ ಪ್ರಕ್ರಿಯೆಯನ್ನೇ ಶುರು ಮಾಡಿಲ್ಲ ಎಂದು ಆರೋಪಿಸಿದರು.

ರಾಜ್ಯದ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಕೇಂದ್ರ ಕೃಷಿ ಮತ್ತು ಗೃಹ ಸಚಿವರನ್ನು ನಾನೇ ಭೇಟಿ ಮಾಡ್ತೀನಿ, ಸಮಯ ಕೊಡಿ ಎಂದು ಪತ್ರ ಬರೆದಿದ್ದೀನೆ ಇವತ್ತಿನವರೆಗೂ ಸಮಯ ಕೊಟ್ಟಿಲ್ಲ. ಬಿತ್ತನೆ ವೈಫಲ್ಯ ಮತ್ತು ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರ ಈಗಾಗಲೇ 6.5 ಲಕ್ಷ ರೈತರಿಗೆ 460 ಕೋಟಿ ನಮ್ಮ ಸರ್ಕಾರ ಬಿಡುಗಡೆ ಮಾಡಿದೆ. ಕುಡಿಯುವ ನೀರು , ಮೇವಿಗೆ 327 ಕೋಟಿ ಬಿಡುಗಡೆ, 780 ಕೋಟಿ ರೂಪಾಯಿ ಜಿಲ್ಲಾಧಿಕಾರಿ ಗಳ ಯೋಜನಾ ನಿರ್ದೇಶಕರ ಖಾತೆಯಲ್ಲಿದ್ದು ತಹಶೀಲ್ದಾರ್ ಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದರು.

ಯಾವ ತಾಲೂಕಿನಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ನಿರ್ವಹಿಸಿದ್ದೇವೆ, ಹಲವು ತಾಲೂಕುಗಳ 60 ಹಳ್ಳಿಗಳಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದ್ದೇವೆ. ಹೊರ ರಾಜ್ಯಕ್ಕೆ ಮೇವು ಹೋಗದಂತೆ ತಡೆದಿದ್ದೇವೆ. ಮೇವಿನ‌ ಬೀಜ ವಿತರಣೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *