ಪಾಟ್ನಾ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನ ಮೂವರು ಸದಸ್ಯರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಪಿಎಫ್ಐ ಸಂಘಟನೆಯ ಈ ಮೂವರು ಆಯೋಧ್ಯೆ ರಾಮ ಮಂದಿರ ಸ್ಫೋಟಿಸಿ ಮತ್ತೆ ಬಾಬ್ರಿ ಮಸೀದಿ ಕಟ್ಟುವುದಾಗಿ ಫೇಸ್‌ಬುಕ್ ಮೂಲಕ ಲೈವ್ ನೀಡಿದ್ದರು. ನೇಪಾಳದಿಂದ ಆಯೋಧ್ಯೆಗೆ ರಸ್ತೆ ಮಾರ್ಗವಾಗಿ ಶಿಲೆ ತರಲಾಗಿದೆ. ಸಾಲಿಗ್ರಾಮದ ಶಿಲೆ ಬಿಹಾರದ ಮೂಲಕ ಆಯೋಧ್ಯೆಗೆ ತೆರಳಿದೆ. ಬಿಹಾರದ ಮೂಲಕ ಸಾಗುತ್ತಿರುವ ವೇಳೆ ಪಿಎಫ್ಐ ಸಂಘಟನೆ ಸದಸ್ಯರು ಫೇಸ್‌ಬುಕ್ ಲೈವ್ ಮೂಲಕ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. ಬಿಹಾರ ಪೊಲೀಸರ ಜೊತೆಗೆ ಕಾರ್ಯಾಚರಣೆ ನಡೆಸಿದ ಎನ್ಐಎ ಮೂವರನ್ನು ಬಂಧಿಸಿದೆ.
ಪಿಎಫ್ಐ ಸಂಘಟನೆಯ ಉಸ್ಮಾನ್ ಫೇಸ್‌ಬುಕ್ ಮೂಲಕ ನೇರ ಪ್ರಸಾರ ಮಾಡಿದ್ದ. ಇತರ ಇಬ್ಬರ ಜೊತೆ ಸೇರಿ ಆಯೋಧ್ಯೆ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದರು. ಬಿಹಾರದ ಮೊತಿಹಾರಿ ಜಿಲ್ಲೆಯ ಕೌನ್‌ವಾನ್ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಎನ್ಐಎ ಹಾಗೂ ಬಿಹಾರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಉಸ್ಮಾನ್ ಹಾಗೂ ಮೂವರು ಫೇಸ್‌ಬುಕ್ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ನೇಪಾಳದಿಂದ ಶಿಲೆ ತಂದು ರಾಮಮಂದಿರ ನಿರ್ಮಾಣ ಮಾಡುವ ಕನಸು ಬಿಟ್ಟು ಬಿಡಿ. ರಾಮ ಮಂದಿ ಸ್ಫೋಟಿಸಿ ಇದೇ ಸ್ಥಳದಲ್ಲಿ ಮತ್ತೆ ಬಾಬ್ರಿ ಮಸೀದಿ ಕಟ್ಟುತ್ತೇವೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದೀಗ ರಾಷ್ಟ್ರೀಯ ತನಿಖಾ ದಳ, ಮೂವರನ್ನು ವಿಚಾರಣೆಗೆ ಒಳಪಡಿಸಿದೆ. ಇಷ್ಟೇ ಅಲ್ಲ ಬಿಹಾರದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಅನ್ನೋ ಮಾತುಗಳಿಗೆ ಈ ಘಟನೆ ಪುಷ್ಠಿ ನೀಡಿದೆ. ಹೀಗಾಗಿ ವಿಚಾರಣೆ ತೀವ್ರಗೊಳಿಸಿದೆ.