Share this news

ರಾಯಚೂರು : ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ದಲಿತ ಮುಖಂಡ ಪ್ರಸಾದ್ ಎಂಬವರನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೇಶವ, ರಾಮು ಹಾಗೂ ದೇವ ಎಂದು ಗುರುತಿಸಲಾಗಿದೆ.ಅ.30ರ ಮುಂಜಾನೆ ರಬಣಕಲ್ ಕ್ಯಾಂಪ್ ಬಳಿ ಜಮೀನಿಗೆ ನೀರು ಕಟ್ಟಲು ತೆರಳಿದ್ದ ಪ್ರಸಾದ್‍ನನ್ನು ಆರೋಪಿಗಳು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದರು. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಪ್ರಸಾದ್‍ನನ್ನು ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ.ಕೊಲೆಯ ಬಳಿಕ ಆರೋಪಿಗಳ ಬಂಧನಕ್ಕೆ ಎಸ್‍ಪಿ ನಿಖಿಲ್.ಬಿ ಮಾರ್ಗದರ್ಶನದಲ್ಲಿ 3 ತಂಡಗಳನ್ನು ರಚನೆ ಮಾಡಲಾಗಿತ್ತು. ಮಾನ್ವಿ ಇನ್ಸ್‌ಪೆಕ್ಟರ್ ವೀರಭದ್ರಯ್ಯ ಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದೆ. ಇದೀಗ ಕೊಲೆ ನಡೆದ ಮೂರೇ ದಿನದಲ್ಲಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *