ಕಾರ್ಕಳ: ಫ್ಲೂಯಿಡ್ ಪವರ್ ಸೊಸೈಟಿ ಆಫ್ ಇಂಡಿಯಾ (ಎಫ್.ಪಿ.ಎಸ್.ಐ) ತನ್ನ ಸುವರ್ಣ ಮಹೋತ್ಸವದ ನೆನಪಿಗಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ‘ಎಂ.ಎಸ್.ಯೋಗನರಸಿಂಹ ಅವಾರ್ಡ್ ಫಾರ್ ಇನ್ನೋವೇಶನ್ ಇನ್ ಡಿಸೈನ್’ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ರೊಬೊಟಿಕ್ಸ್ ವಿಭಾಗದ ರಿಸರ್ಚ್ ಎಸೋಸಿಯೇಟ್ ನಿರಂಜನ್ ಶರ್ಮಾ ಕೆ.ವಿ ಮತ್ತು ಸಂಧ್ಯಾ ಡಿ ಭಟ್ ಅವರನ್ನೊಳಗೊಂಡ ತಂಡವು ಪ್ರೊ.ಡಾ.ಮುರಳೀಧರ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ ‘ರಿಯಲೈಸೇಶನ್ ಆಫ್ ಡಿಫರೆಂಟ್ ವೆಲ್ಡ್ ಶೆಡ್ಯೂಲ್ಸ್ ಇನ್ ನ್ಯೂಮ್ಯಾಟಿಕಲಿ ಕಂಟ್ರೋಲ್ಡ್ ಇಲೆಕ್ಟ್ರೀಡ್ ಇನ್ ರೆಸಿಸ್ಟೆನ್ಸ್ ಸ್ಪಾಟ್ ವೆಲ್ಡಿಂಗ್ ಮೆಶಿನ್’ ಎಂಬ ಪ್ರಾಜೆಕ್ಟ್ ನ್ನು ಪ್ರಸ್ತುತಪಡಿಸಿ ಪ್ರಥಮ ಬಹುಮಾನ ಪಡೆದಿದೆ.
ದೇಶದ 13 ಎಂಜಿನಿಯರಿAಗ್ ಸಂಸ್ಥೆಗಳ 20 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ತೀರ್ಪುಗಾರರ ಸಮಿತಿಯು ಉದ್ಯಮ ಮತ್ತು ಶೈಕ್ಷಣಿಕ ತಜ್ಞರನ್ನು ಒಳಗೊಂಡಿತ್ತು. ವಿನ್ಯಾಸದ ಮೌಲ್ಯಮಾಪನವು ಪರಿಕಲ್ಪನೆಯ ಅನನ್ಯತೆ, ನಾವೀನ್ಯತೆ, ಇಂಧನ ಉಳಿತಾಯ, ಅನುಷ್ಠಾನದ ಸುಲಭತೆ ಮತ್ತು ಪ್ರಸ್ತುತಿಯ ಸ್ಪಷ್ಟತೆಯನ್ನು ಆಧರಿಸಿದೆ. ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿAಗ್ ನಲ್ಲಿ ಇತ್ತೀಚೆಗೆ ನಡೆದ ಎರಡನೇ ಫ್ಲೂಯಿಡ್ ಪವರ್ ಆರ್ & ಡಿ ಸಂಗಮ (ಎಫ್ಪಿಆರ್ಡಿ 2023) ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವಿಜೇತರಿಗೆ ನೀಡಲಾಯಿತು. ತಂಡದ ಸಾಧನೆ ನಿಟ್ಟೆ ತಾಂತ್ರಿಕ ಕಾಲೇಜಿನ ಹಿರಿಮೆಗೆ ಮತ್ತೊಂದು ಗರಿಸೇರಿದಂತೆ, ಇಂತಹ ಯೋಜನೆಗಳಿಗೆ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಾ ಸಹಕರಿಸಲಿದೆ ಎಂದು ಸಂಸ್ಥೆ ತಿಳಿಸಿದೆ.