ಕಾರ್ಕಳ: ಪತ್ನಿಗೆ ಜೀವನಾಂಶ ನೀಡದೇ ವಂಚಿಸಿದ ಪತಿ ಮಹಾಶಯನೊಬ್ಬ ಆಕೆಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣದಲ್ಲಿ ಪತಿಯ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಝರೀನಾ ಬಾನು ಎಂಬವರಿಗೆ ಕಾರ್ಕಳ ತಾಲೂಕು ರೆಂಜಾಳದ ರಫೀಕ್ ಎಂಬವರ ಜತೆ ಕಳೆದ 2003ರ ಡಿ.28ರಂದು ಚಿನ್ನಾಭರಣ ಸಹಿತ ವರದಕ್ಷಿಣೆ ನೀಡಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಇದೀಗ ದಂಪತಿ ನಡುವಿನ ಕಲಹ ತಾರಕಕ್ಕೇರಿ ಆರೋಪಿ ಪತಿ ರಫೀಕ್ ತನ್ನ ಪತ್ನಿ ಝರೀನಾಗೆ ಜೀವನಾಂಶ ನೀಡದೇ, ರಾಜಿ ಸಂಧಾನ ನಡೆಸುವವೇಳೆ ಅವಾಚ್ಯವಾಗಿ ನಿಂದಿಸಿದ್ದು ಈತನ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಮದುವೆಯಾದ ಆರಂಭದಲ್ಲಿ ಝರೀನಾ ಹಾಗೂ ರಫೀಕ್ ಬೆಂಗಳೂರಿನಲ್ಲಿ ನೆಲೆಸಿದ್ದರು.ತದನಂತರ ರಫೀಕ್ ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಿದ್ದ. ಈತನಿಗೆ ಪಾಸ್‌ಪೋರ್ಟ್ ಹಾಗೂ ವೀಸಾ ಮಾಡಿಸಲು ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ ನೀಡಿದ್ದರು. ಆ ಬಳಿಕ ರಫೀಕ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ತವರು ಮನೆಗೆ ಕಳುಹಿಸಿದ್ದ. ಬಳಿಕ ಆಕೆಯ ಸಂಪರ್ಕ ಮಾಡದೇ ಪತ್ನಿ ಮಕ್ಕಳ ಜೀವನ ನಿರ್ವಹಣೆಗೂ ಹಣ ನೀಡದೇ ವಂಚಿಸಿದ್ದಾನೆ ಎಂದು ಝರೀನಾ ತನ್ನ ಅಳಿಯನ ಬಳಿ ಹೇಳಿಕೊಂಡಿದ್ದರು. ಇದಾದ ಬಳಿಕ ಅಳಿಯ ತನ್ನ ಅತ್ತೆ ಹಾಗೂ ಮಾವನನ್ನು ರಾಜಿ ಮಾಡಿಸುವ ನಿಟ್ಟಿನಲ್ಲಿ ಇಬ್ಬರನ್ನು ಕರೆದು ಮಾತನಾಡಿಸಿದ್ದರು. ಆದರೆ ರಾಜಿ ಫಲಪ್ರದವಾಗದ ಹಿನ್ನಲೆಯಲ್ಲಿ ಆರೋಪಿ ರಫೀಕ್ ಜ.12ರಂದು ಕಾರ್ಕಳ ಬ್ಯಾಂಕ್ ಒಂದರ ಬಳಿ ಪತ್ನಿ ಝರೀನಾರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ, ಇದಲ್ಲದೇ ಆರೋಪಿ ಪತಿಯ ಸಹೋದರಿಯ ಪುತ್ರಿ ಸಮೀರಾ ಕೂಡ ತನ್ನ ಸೋದರ ಮಾವನ ಜತೆ ಶಾಮೀಲಾಗಿ ಕುಮ್ಮಕ್ಕು ನೀಡಿದ್ದಾಳೆ ಎಂದು ಎಂದು ಝರೀನಾ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ