ರಾಂಚಿ: ದೇಶದ ಕೋಟ್ಯಂತರ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಉಡುಗೊರೆ ನೀಡಿದ್ದಾರೆ. ದೇಶದ 8 ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.
ಜಾರ್ಖಂಡ್‌ನ ಖುಂಟಿಯಲ್ಲಿ ಬಿರ್ಸಾ ಮುಂಡಾ ಜಯಂತಿಯಂದು ‘ಬುಡಕಟ್ಟು ಹೆಮ್ಮೆಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಬಟನ್ ಒತ್ತುವ ಮೂಲಕ ಅವರು ಯೋಜನೆಯ ಹಣವನ್ನು ರೈತರ ಖಾತೆಗಳಿಗೆ ಹಸ್ತಾಂತರಿಸಿದ್ದಾರೆ. ಇದರೊಂದಿಗೆ ನೇರ ನಗದು ವರ್ಗಾವಣೆ ಮೂಲಕ ಕೋಟ್ಯಂತರ ರೈತರ ಖಾತೆಗಳಿಗೆ 2000 ರೂ. ತಲುಪಿದೆ.
2019ರ ಫೆಬ್ರವರಿಯಲ್ಲಿ ಈ ಯೋಜನೆ ಆರಂಭಗೊಂಡಿತು. ವರ್ಷಕ್ಕೆ 6 ಸಾವಿರ ರೂಗಳನ್ನು ತಲಾ 2,000 ರೂಗಳ 3 ಕಂತುಗಳಲ್ಲಿ ಸರ್ಕಾರವು ಕೃಷಿಕ ಕುಟುಂಬಗಳಿಗೆ ನೀಡುತ್ತಿದೆ. ಅದರಂತೆ ಈವರೆಗೆ 15 ಕಂತುಗಳನ್ನು ನೀಡಿದೆ. ಇಲ್ಲಿಯವರೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣದ ಮೊತ್ತ 2.75 ಲಕ್ಷ ಕೋಟಿ ರೂ ಆಗಿದೆ.
ಒಂದು ಹಣಕಾಸು ವರ್ಷದಲ್ಲಿ ಏಪ್ರಿಲ್ನಿಂದ ಜುಲೈವರೆಗೆ ಒಂದು ಕಂತು, ಆಗಸ್ಟ್ನಿಂದ ನವೆಂಬರ್ವರೆಗೂ ಇನ್ನೊಂದು ಕಂತು, ಹಾಗು ಡಿಸೆಂಬರ್ನಿಂದ ಮಾರ್ಚ್ವರೆಗೆ ಮಗದೊಂದು ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ.