ಕನಕಗಿರಿ : ಮುಂದಿನ ದಿನಗಳಲ್ಲಿ ರೈತರಿಗೆ 7 ಗಂಟೆಗೆ ಬದಲಾಗಿ 10 ಗಂಟೆ ವಿದ್ಯುತ್ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ತಾಲೂಕಿನ ಸುಳೇಕಲ್ ಗ್ರಾಮದ ಬಳಿಯ .150 ಕೋಟಿ ವೆಚ್ಚದ 220/110/11ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಎರಡು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಹೊಸ ವಿದ್ಯುತ್ ಉಪಕೇಂದ್ರಗಳ ಅನಾವರಣ ಮಾಡಲಾಗಿದೆ. ಇಂಧನ ಇಲಾಖೆ ಇತಿಹಾಸದಲ್ಲಿ ಇದು ಹೊಸ ಮೈಲುಗಲ್ಲು. ಇಂಧನ ಇಲಾಖೆಯನ್ನು ಜನಸ್ನೇಹಿ ಮಾಡಲು ಸರ್ಕಾರ ಬದ್ಧವಿದೆ. ಗ್ರಾಮೀಣ ಭಾಗದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಜನಾಂಗಕ್ಕೆ ಅಮೃತ ಜ್ಯೋತಿ ಯೋಜನೆಯಡಿ 75 ಯುನಿಟ್ ಉಚಿತ ವಿದ್ಯುತ್ ಪೂರೈಸಲು ಘೋಷಿಸಲಾಗಿದೆ. ರಾಜ್ಯದ ವಿದ್ಯುತ್ ರಹಿತ ಪ್ರದೇಶದಲ್ಲಿ 6 ಸಾವಿರ ಕಿ.ಮೀ. ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಬೆಳಕು ಯೋಜನೆಯಡಿ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ, ಸಾರ್ವಜನಿಕರಿಗೆ ನೆರವಾಗಿದ್ದೇವೆ ಎಂದರು.
ಪರಿಸರ ಸ್ನೇಹಿ ಸೌರಶಕ್ತಿ ಮತ್ತು ಪವನ ಶಕ್ತಿ ಉತ್ಪಾದನಾ ಘಟಕಗಳನ್ನು ಹೆಚ್ಚಿಸಲು ಮುಂದಾಗಿದ್ದೇವೆ. ರೈತರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ನೀಡುವುದು ನಮ್ಮ ಸರ್ಕಾರದ ಆಶಯ. ಸುಟ್ಟುಹೋದ ಟಿಸಿಗಳನ್ನು ಬದಲಾವಣೆ ಮಾಡಿಸಿಕೊಳ್ಳಲು ರೈತರು ಒಂದು ವಾರದಿಂದ 15 ದಿನ ಕಾಲ ಕಾಯುವುದಲ್ಲದೆ, ತುಂಬಾ ತೊಂದರೆ ಅನುಭವಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಈಗ 24 ಗಂಟೆಯೊಳಗೆ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದ್ದು, ರೈತರ ಬೇಡಿಕೆಗಳನ್ನು ಸಾಕಾರಗೊಳಿಸಿದ್ದೇವೆ ಎಂದರು.