ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳ ಹೊರೆ ನೀಗಿಸುವ ಆತುರದಲ್ಲಿ ರಾಜ್ಯ ಸರ್ಕಾರ ಬೆಲೆಏರಿಕೆ ಜತೆಗೆ ಬೇರೆ ಬೇರೆ ಹೊರೆಯನ್ನು ರಾಜ್ಯದ ಜನರಿಗೆ ಹೇರುತ್ತಿದೆ. ವಾಹನಗಳಿಗೆ ಲೈಫ್ ಟೈಂ ಟ್ಯಾಕ್ಸ್ ಪಾವತಿಗೆ ಸರ್ಕಾರ ಆದೇಶ ಹೊರಡಿಸಿದ್ದು ಗೂಡ್ಸ್ ವಾಹನ ಮಾಲೀಕರಿಗೆ ಈ ಕಾಯ್ದೆ ಭಾರೀ ಹೊಡೆತಕೊಡಲಿದೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಗೂಡ್ಸ್ ಟ್ರಕ್ ಮಾಲೀಕರು ಸಿಡಿದೆದ್ದಿದ್ದಾರೆ. .
50ಕ್ಕೂ ಹೆಚ್ಚು ಟ್ರಕ್‌ಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಶಾಂತಿನಗರ ಬಸ್ ನಿಲ್ದಾಣದ ಬಳಿಯ ಬಿಟಿಎಸ್ ರೋಡ್ ಬ್ಲಾಕ್ ಮಾಡಲಾಗಿದೆ. ಒಂದು ವೇಳೆ ಸರ್ಕಾರ ಈ ಆದೇಶ ಹಿಂಪಡೆಯದೇ ಇದ್ದರೆ ನಾಳೆ(ಸೆ.01) ಬೆಂಗಳೂರಿನಾದ್ಯAತ ಎರಡೂವರೆ ಸಾವಿರ ಎಂಜಿವಿ ಗೂಡ್ಸ್ ವಾಹನ ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಕರ್ನಾಟಕ ಗೂಡ್ಸ್ ವೆಹಿಕಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ಜುಲೈ 28ರಂದು ಗೆಜೆಟ್ ಅಧಿಸೂಚನೆ ಹೊರಡಿಸಿರುವ ಸರ್ಕಾರ ಆ.1ರಿಂದಲೇ ಲೈಫ್ ಟೈಮ್ ರೋಡ್ ಟ್ಯಾಕ್ಸ್ ಕಾಯ್ದೆ ಜಾರಿಗೊಳಿಸಿದೆ. ಈ ಹಿಂದೆ ಹಳದಿ ಫಲಕದ ಎಲ್‌ಜಿವಿ, ಎಂಜಿವಿ ವಾಹನಗಳ ಮಾಲೀಕರು ಮೂರು ತಿಂಗಳಿಗೊಮ್ಮೆ 2,000 ರೂ. ಟ್ಯಾಕ್ಸ್ ಕಟ್ಟುತಿದ್ದರು. ಆದರೆ ಈಗ ಈ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಅದರಂತೆ ಈ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ತ್ರೈಮಾಸಿಕ ತೆರಿಗೆ ಪಾವತಿ ಬದಲಾಗಿ ವಾಹನ ನೋಂದಣಿ ವೇಳೆ ಲೈಫ್‌ಟೈಂ (ಏಕಕಾಲಿಕ) ಪಾವತಿ ಪಡೆಯಲು ಸರ್ಕಾರ ಆದೇಶ ನೀಡಿದೆ. ಇದರಿಂದ ವಾಹನಗಳ ಮಾಲೀಕರು ಕಂಗಾಲಾಗಿದ್ದಾರೆ. ಮೂರು-ನಾಲ್ಕು ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಒಂದೇ ಬಾರಿ ಭಾರೀ ಮೊತ್ತದ ಟ್ಯಾಕ್ಸ್ ಕಟ್ಟುವುದು ಕಷ್ಟವಾಗಿದೆ. ಹೀಗಾಗಿ ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.