ನವದೆಹಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರವಾದ ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ಮೈತ್ರಿಕೂಟದಲ್ಲಿ ಕೇಳಿಬಂದಿದೆ ಎನ್ನಲಾಗುತ್ತಿದೆ.
ಕಳೆದ ವಾರವಷ್ಟೇ ವಯನಾಡಿಗೆ ಭೇಟಿ ನೀಡಿದ್ದ ರಾಹುಲ್, ವಯನಾಡು ನನಗೆ ಮನೆ ಮತ್ತು ಕುಟುಂಬ ಇದ್ದಂತೆ ಎನ್ನುವ ಮೂಲಕ ಮತ್ತೆ ಅಲ್ಲೇ ಸ್ಪರ್ಧಿಸುವ ಸುಳಿವು ನೀಡಿದ್ದರು. ಆದರೆ ಭಾನುವಾರ ಪ್ರಕಟವಾದ ಪಂಚರಾಜ್ಯಗಳ ಚುನಾವಣೆಯಲ್ಲಿನ ಕಾಂಗ್ರೆಸ್ ಸೋಲಿನಿಂದ ಕೇರಳದಿಂದ ರಾಹುಲ್ ಗಾಂಧಿ ಮರು ಸ್ಪರ್ಧೆಗೆ ಕಾಂಗ್ರೆಸ್ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ನಾವು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದೇವೆ. ಹೀಗಿರುವಾಗ ನಮ್ಮ ಪ್ರಾಬಲ್ಯ ಇರುವ ಕೇರಳದಲ್ಲೇ ರಾಹುಲ್ ಸ್ಪರ್ಧೆ ಮಾಡುವುದು ಸರಿಯಲ್ಲ. ಇಂಡಿಯಾ ಮೈತ್ರಿಕೂಟದ ಹೋರಾಟ ಬಿಜೆಪಿ ವಿರುದ್ಧವಾಗಿರುವ ಹಿನ್ನಲೆಯಲ್ಲಿ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ರಾಹುಲ್ ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವುದು ಸೂಕ್ತ ಎಂದು ಸಿಪಿಐ ಪ್ರದಾನ ಕಾರ್ಯದರ್ಶಿ ಡಿ.ರಾಜಾ, ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿ ಎಂ.ವಿ.ಗೋವಿಂದನ್, ಕೇರಳದ ಸಚಿವ ಕೆ.ರಾಜನ್ ಮೊದಲಾದವರು ಬಹಿರಂಗವಾಗಿಯೇ ಸಲಹೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮೈತ್ರಿಕೂಟದ ಅವಶ್ಯಕತೆ ಇಲ್ಲ ಎಂದಾದಲ್ಲಿ ಕೇರಳದಲ್ಲಿ ಎಲ್ಡಿಎಫ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ನಾವಂತೂ ವಯನಾಡಿನಲ್ಲಿ ಎಲ್ಡಿಎಫ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದೇವೆ. ರಾಹುಲ್ ಬಿಜೆಪಿ ವಿರುದ್ಧ ಹೋರಾಡಬೇಕೋ ಅಥವಾ ಎಲ್ಡಿಎಫ್ ವಿರುದ್ಧವೋ ಎಂಬುದನ್ನು ಸ್ವತಃ ಕಾಂಗ್ರೆಸ್ ನಿರ್ಧರಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ರಾಹುಲ್ ಗಾಂಧಿ ಬಿಜೆಪಿಯ ಬಲಪಂಥೀಯವಾದದ ವಿರುದ್ಧ ಹೋರಾಡಬೇಕೇ ವಿನಃ, ರಾಜಕೀಯ ಪಕ್ಷಗಳ ಅಂತಾರಾಜ್ಯ ದ್ವೇಷದ ವಿರುದ್ಧ ಅಲ್ಲ ಎಂದು ಸಿಪಿಎಂ ನಾಯಕ ಗೋವಿಂದನ್ ಸಲಹೆ ನೀಡಿದ್ದಾರೆ.
ಸಚಿವ ರಾಜನ್ ಮಾತನಾಡಿ ರಾಹುಲ್ ದಕ್ಷಿಣದ ರಾಜ್ಯದಿಂದಲೇ ಸ್ಪರ್ಧಿಸುವ ಇರಾದೆ ಹೊಂದಿದ್ದರೆ ಕೇರಳದ ಬದಲು ಕರ್ನಾಟಕದಿಂದ ಕಣಕ್ಕೆ ಇಳಿಯಬೇಕು ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ಹಾಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ನಲ್ಲೂ ರಾಹುಲ್ ಗಾಂಧಿ ಅವರನ್ನು ಈ ಬಾರಿ ಕೇರಳದ ಬದಲು ಕರ್ನಾಟಕದಿಂದ ಕಣಕ್ಕೆ ಇಳಿಸುವ ಕುರಿತು ಚರ್ಚೆ ನಡೆದಿದೆ ಎಂದು ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಿದರೆ ಇಡೀ ದೇಶವೇ ಕರ್ನಾಟಕದತ್ತ ನೋಡುವಂತಾಗಲಿದೆ.