Share this news

ಕಾರ್ಕಳ : ಲೋಪದೋಷವಿಲ್ಲದೇ ಯಾವುದೇ ಯೋಜನೆಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುವಲ್ಲಿ ಶಾಸಕರ ಪಾತ್ರ ಮಹತ್ವದಾಗಿರುತ್ತದೆ. ಕಾರ್ಕಳ ತಾಲೂಕಿನ ಎರ್ಲಪಾಡಿ ಉಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಪರಶುರಾಮನ ಬೃಹತ್ ಆಕಾರದ ಮೂರ್ತಿ ಸ್ಥಾಪನೆಯಲ್ಲಿ ಬಳಸಲಾದ ಲೋಹದ ಕುರಿತು ಲೋಪದೋಷಗಳು ಜಗಜ್ಜಾಹಿರಗೊಂಡಿದ್ದು, ಅದರ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕಾದ ಹೊಣೆಗಾರಿಕೆಯು ಶಾಸಕ ಸುನಿಲ್ ಕುಮಾರ್ ಅವರ ಮೇಲಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡಿಲ್ಲ. ಮೂಲ ಕಾಂಗ್ರೆಸ್ಸಿಗನಾಗಿದ್ದು, ಈ ಕ್ಷಣದವರೆಗೂ ಅದೇ ಪಕ್ಷದಲ್ಲಿ ಇದ್ದೇನೆ. ಮುಂದೆಯೂ ಇರುತ್ತೇನೆ. ರಾಜಕೀಯ ಬಣ್ಣ ಬದಲಾಯಿಕೊಳ್ಳುವ ಗೋಸುಂಬೆ ನನ್ನಲ್ಲ. ಜನಪರ ಅಭಿವೃದ್ಧಿ ಕಾಮಗಾರಿಗೆ ಸದಾ ಬೆಂಬಲಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಅಭಿವೃದ್ಧಿಯ ನೆಪದಲ್ಲಿ ಕೊಳ್ಳೆ ಹೊಡೆಯುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಪ್ರಕ್ರಿಯೆಗಳು ಕಾರ್ಕಳದಲ್ಲಿ ನಡೆದಿದ್ದು, ಮುಂದಿನ ದಿನಗಳಲ್ಲಿ ಅದರ ಜಾತಕವನ್ನು ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಭಾರೀ ದೊಡ್ಡ ಹಗರಣಗಳಲ್ಲಿ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಒಂದಾಗಿದೆ. ಪರಶುರಾಮ ಥೀಮ್ ಪಾರ್ಕ್ಗೆ ಸರಕಾರದಿಂದ ಭೂಮಿ ಮಂಜೂರಾಗದೇ ಕೋಟ್ಯಾಂತರ ರೂ. ಅನುದಾನ ಮಂಜೂರು ಆಗಿರುವುದು ಹಗರಣ ಒಂದು ಭಾಗವಾಗಿದೆ.ಪರಶುರಾಮ ಥೀಮ್ ಪಾರ್ಕ್ನ ಯೋಜನೆಯ ಅಂದಾಜು ವೆಚ್ಚ ರೂ. 14.42 ಕೋಟಿ ಆಗಿದ್ದು, ಅಂದಿನ ಬಿಜೆಪಿ ಸರಕಾರವು ಯಾವುದೇ ಅನುಮೋದನೆ ಇಲ್ಲದೇ ರೂ. 6.72 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಪರಶುರಾಮ ಮೂರ್ತಿಗೆ ರೂ. 2.04 ಕೋಟಿ ಕಾದಿರಿಸಲಾಗಿತ್ತು. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದ ವೇಳೆ ಸುಮಾರು 2 ಕೋಟಿ ಮೊತ್ತ ಸಮರ್ಪಕವಾದ ಬಿಲ್ ಇಲ್ಲದೆ ಪಾವತಿ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪರಶುರಾಮ ಮೂರ್ತಿಗೆ ರೂ. 2.04 ಕೋಟಿ ಕಾದಿರಿಸಲಾಗಿದ್ದರೂ, ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಯ ಕಾರ್ಯಕ್ರಮಕ್ಕೆ 2.18 ಕೋಟಿ ಖರ್ಚು ಭರಿಸಲಾಗಿದೆ. ಇದರಲ್ಲಿ 60 ಲಕ್ಷಕ್ಕೆ ಸಮರ್ಪಕವಾದ ಬಿಲ್ ಇಲ್ಲ. ಇದರ ಕುರಿತು ಸರಕಾರದ ಮಟ್ಟದಲ್ಲಿ ತನಿಖೆಯಾಗಬೇಕೆಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.


ನಕಲಿ ಮೂರ್ತಿ ಬದಲಾಯಿಸುವ ಹುನ್ನಾರ:
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಲ್ಲೇಬೇಕೆಂಬ ಪಣತೊಟ್ಟು ನಾನಾ ರೀತಿಯಲ್ಲಿ ಕಸರತ್ತು ನಡೆಸಿರುವ ಶಾಸಕ ಸುನೀಲ್ ಕುಮಾರ್ ಅವರಿಗೆ ಆಗ ನೆನಪಿಗೆ ಬಂದಿರುವುದು ಪರಶುರಾಮ ಥೀಮ್ ಪಾರ್ಕ್. ಧರ್ಮ, ಕಾನೂನು, ದೇಶ, ಅಭಿವೃದ್ಧಿ ಎಂದೆಲ್ಲ ಮಂತ್ರ ಪಠಿಸುವ ಸುನೀಲ್ ಕುಮಾರ್ ಅವರು ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಅದು ಜಗಜ್ಜಾಹಿರಗೊಳ್ಳುತ್ತಿದ್ದಂತೆ ನಾನಾ ಕಾರಣವೊಡ್ಡಿ ಪರಶುರಾಮ ಥೀಮ್ ಪಾರ್ಕ್ಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ಪ್ರತಿಮೆಗೆ ದಿಬ್ಬಂಧನ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಪರಶುರಾಮ ಮೂರ್ತಿ ಸ್ಥಾಪನೆಯಲ್ಲಿ “ಡಿಗ್ರಿ”(ಸ್ಥಾಪನೆಯ ಕೋನ) ಸರಿ ಇಲ್ಲ ಎಂಬ ನೆಪದಲ್ಲಿ ಪ್ರತಿಮೆಯನ್ನೇ ಬದಲಾಯಿಸಿ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವ ಹುನ್ನಾರದಲ್ಲಿ ಶಾಸಕ ಸುನೀಲ್ ಕುಮಾರ್ ಮುಂದಾಗಿದ್ದಾರೆ ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ. 

Leave a Reply

Your email address will not be published. Required fields are marked *