ನವದೆಹಲಿ: ವಕೀಲರು ಮುಷ್ಕರ ನಡೆಸುವಂತಿಲ್ಲ ಅಥವಾ ತಮ್ಮ ಕರ್ತವ್ಯದಿಂದ ದೂರ ಉಳಿಯುವಂತಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ಸೂಚನೆ ನೀಡಿದೆ. ವಕೀಲರು ಮುಷ್ಕರಕ್ಕೆ ಇಳಿದರೆ ಅಥವಾ ಕರ್ತವ್ಯವನ್ನು ಬಹಿಷ್ಕರಿಸಿದರೆ ನ್ಯಾಯಾಂಗದ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಎಂದು ಹೇಳಿದೆ.
ಇದೇ ವೇಳೆ, ವಕೀಲರ ‘ನೈಜ ತೊಂದರೆ’ಗಳ ಪರಿಹಾರಕ್ಕಾಗಿ ರಾಜ್ಯ ಮಟ್ಟದಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ದೂರು ಇತ್ಯರ್ಥ ಸಮಿತಿಯನ್ನು ರಚನೆ ಮಾಡುವಂತೆ ಎಲ್ಲ ಹೈಕೋರ್ಟ್‌ಗಳಿಗೂ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ನಿರ್ದೇಶನ ನೀಡಿದೆ. ವಕೀಲರ ದೂರುಗಳಿಗೆ ವೇದಿಕೆ ಒದಗಿಸಲು ಜಿಲ್ಲಾ ಮಟ್ಟದಲ್ಲೂ ಸಮಿತಿಗಳನ್ನು ರಚಿಸಬೇಕು ಎಂದು ಸೂಚನೆ ನೀಡಿದೆ.
ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿನ ಬದಲಾವಣೆಗಳು, ಪ್ರಕರಣಗಳ ನೋಂದಣಿ ಅಥವಾ ಕೆಳ ನ್ಯಾಯಾಂಗದ ಸದಸ್ಯರ ದುರ್ನಡತೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳ ಸಲ್ಲಿಕೆಗೆ ವಕೀಲರಿಗೆ ಏನಾದರೂ ಸಮಸ್ಯೆ ಇದ್ದರೆ, ದೂರು ಇತ್ಯರ್ಥ ಸಮಿತಿಗೆ ಸಲ್ಲಿಕೆ ಮಾಡಬಹುದು. ತನ್ಮೂಲಕ ಮುಷ್ಕರಗಳನ್ನು ತಪ್ಪಿಸಬಹುದು. ರಾಜ್ಯ ಮಟ್ಟದ ದೂರು ಇತ್ಯರ್ಥ ಸಮಿತಿಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿರಬೇಕು. ಇಬ್ಬರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರಬೇಕು. ಅಡ್ವೋಕೇಟ್ ಜನರಲ್, ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷರು ಹಾಗೂ ಹೈಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರು ಸಮಿತಿಯಲ್ಲಿರಬೇಕು. ಇದೇ ರೀತಿಯ ಸಮಿತಿಯನ್ನು ಜಿಲ್ಲಾ ಮಟ್ಟದಲ್ಲೂ ರಚಿಸಬೇಕು ಎಂದು ಹೇಳಿದೆ.
ವಕೀಲರ ದೂರುಗಳ ಪರಿಹಾರಕ್ಕೆ ಸೂಕ್ತ ವೇದಿಕೆ ರಚಿಸಬೇಕು ಎಂದು ಕೋರಿ ಡೆಹ್ರಾಡೂನ್ ಜಿಲ್ಲಾ ಬಾರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯ ಇತ್ಯರ್ಥ ವೇಳೆ ಕೋರ್ಟ್ ಈ ತಾಕೀತು ಮಾಡಿದೆ.