ಕಾರ್ಕಳ: ಆಧುನಿಕತೆ ಬೆಳೆದಂತೆ ಮನುಷ್ಯ ಒತ್ತಡದಲ್ಲೇ ಕೆಲಸ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವ್ಯವಸ್ಥಿತ ಜೀವನ ಶೈಲಿಯ ಕಾರಣದಿಂದ ಇಂದು ಮನುಷ್ಯ ಹಲವಾರು ದೈಹಿಕ ಹಾಗೂ ಮಾನಸಿಕ ರೋಗಗಳಿಂದ ಬಳಲುತ್ತಿದ್ದು, ಇದನ್ನು ನಿವಾರಿಸಲು ಯೋಗ ಹಾಗೂ ಪ್ರಾಣಾಯಾಮಗಳಿಂದ ಮಾತ್ರ ಸಾಧ್ಯ ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಹರೀಶ್ ಅಭಿಪ್ರಾಯಪಟ್ಟರು.
ಅವರು ಹೆಬ್ರಿ ತಾಲೂಕಿನ ವರಂಗ ಜೈನ ಮಠದ ಆವರಣದಲ್ಲಿ ಜೂನ್ 2ರಂದು ಶುಕ್ರವಾರ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ,ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ಪ್ರಾತ್ಯಕ್ಷಿಕೆ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಪರಿಶ್ರಮದ ಫಲವಾಗಿ ಯೋಗ ಚಿಕಿತ್ಸೆ ವಿಶ್ವವ್ಯಾಪಿಯಾಗಿದೆ. ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೆ ಎಂ.ಸಿ ಮಣಿಪಾಲದ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಉಪಾಧ್ಯಾಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ಯೋಗಚಿಕಿತ್ಸೆಯ ಮೂಲಸ್ವರೂಪವನ್ನು ವಿವರಿಸಿದರು. ಈ ಸಂದರ್ಭದಲ್ಲಿ ದೆಹಲಿಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಡಾ.ಈಶ ಬಸವರಡ್ಡಿ ಆನ್ಲೆöÊನ್ ಮೂಲಕ ಪಾಲ್ಗೊಂಡು ವರಂಗದ ಐತಿಹಾಸಿಕ ಕ್ಷೇತ್ರದಲ್ಲಿ ಯೋಗ ಮಹೋತ್ಸವ ನಡೆಯುತ್ತಿರುವುದು ಆರ್ಥಪೂರ್ಣ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಡಾ. ಶಶಿಕಾಂತ್ ಜೈನ್,ವರಂಗ ಜೈನ ಮಠದ ವ್ಯವಸ್ಥಾಪಕರಾದ ಶ್ರೀ ಯುವರಾಜ ಆರಿಗ, ಸೌಖ್ಯವನದ ವೈದ್ಯಾಧಿಕಾರಿಗಳಾದ ಡಾ.ಗೋಪಾಲ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
.ವರಂಗದ ಹೊಂಬುಜ ಜೈನ ಮಠದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಸಂದೇಶವನ್ನು ಕಾರ್ಯನಿರ್ವಹಣಾಧಿಕಾರಿ ಅಶೋಕ್ ಜೈನ್ ವಾಚಿಸಿದರು.
ಧರ್ಮಸ್ಥಳದ ಶಾಂತಿವನ ಕಾರ್ಯದರ್ಶಿ ಸೀತಾರಾಮ ತೊಳ್ಪಡಿತ್ತಾಯ ಸ್ವಾಗತಿಸಿ,ಶಾಂತಿವನದ ಮುಖ್ಯ ವೈದ್ಯಾಧಿಕಾರಿಗಳಾದ ಮತ್ತು ಯೋಗ ವಿಭಾಗ ಮುಖ್ಯಸ್ಥರೂ ಆದ ಡಾ.ಶಿವಪ್ರಸಾದ್ ಶೆಟ್ಟಿ ವಂದಿಸಿದರು.ವಿದ್ಯಾರ್ಥಿನಿ ಕು. ಅನನ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಹೆಬ್ರಿ ತಾಲೂಕಿನ ಅನೇಕ ಭಾಗದಿಂದ ಸುಮಾರು 1000 ಕ್ಕೂ ಹೆಚ್ಚು ಶಿಬಿರಾರ್ಥಿಗಳಿಂದ ಮನಮೋಹಕ ಪ್ರಾತ್ಯಕ್ಷಿಕೆ ನಡೆಯಿತು. ಯೋಗಪಟು ಡಾ.ಆತ್ಮಿಕಾ ಶೆಟ್ಟಿ ಯೋಗ ಪ್ರಾತ್ಯಕ್ಷಿಕೆಯನ್ನು ನಿರ್ದೇಶಿಸಿದರು.