ಹಾಸನ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹಾಸನಾಂಬೆ ದೇವಾಲಯವು ಗುರುವಾರ ಮಧ್ಯಾಹ್ನ ತೆರೆದಿದ್ದು,ಮುಂದಿನ 15 ದಿನಗಳ ಕಾಲ ಭಕ್ತರಿಗೆ ಹಾಸನಾಂಬೆ ದರ್ಶನಭಾಗ್ಯ ಸಿಗಲಿದೆ.
ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರ ದಂಡೇ ಹಾಸನಕ್ಕೆ ಹರಿದು ಬರುತ್ತದೆ. ಅಧಿಕೃತವಾಗಿ ಹಾಸನಾಂಬೆ ದೇವಾಲಯದ ಬಾಗಿಲು ತೆರೆದರೂ, ಇಂದು ಭಕ್ತರ ದರ್ಶನಕ್ಕೆ ಅವಕಾಶವಿಲ್ಲ. ನಾಳೆಯಿಂದ ನವೆಂಬರ್.14ರವರೆಗೆ 24 ಗಂಟೆಯೂ ನಿರಂತರವಾಗಿ ಭಕ್ತರ ದರ್ಶನಕ್ಕೆ ಅವಕಾಶ ದೊರೆಯಲಿದೆ.
ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದ ಅರ್ಚಕರ ತಂಡ ದೇವಾಲಯಕ್ಕೆ ಪೂಜಾ ಸಾಮಗ್ರಿಗಳೊಂದಿಗೆ ತೆರಳಿ, ದೇವಸ್ಥಾನ ಬಾಗಿಲು ತೆರೆಯುವ ಮುನ್ನ ಗರ್ಭಗುಡಿ ಬಾಗಿಲಿಗೆ ಪೂಜೆ ನೆರವೇರಿಸಿ,ಬಾಳೆಗಿಡವನ್ನು ಕತ್ತರಿಸುವ ಮೂಲಕ ದೇವಾಲಯದ ಬಾಗಿಲು ತೆರೆಯಲಾಯಿತು.
ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯವರು ಹಾಸನಾಂಬ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿದರು. ಮಾಜಿ ಪಿಎಂ ಹೆಚ್ ಡಿ ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ, ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು.
ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಪ್ರತಿವರ್ಷ 5 ರಿಂದ 6 ಲಕ್ಷ ಭಕ್ತರು ಬರುತ್ತಿದ್ದರು. ಆದರೇ ಈ ಬಾರಿ ಸರ್ಕಾರದ ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣದ ಪರಿಣಾಮ 10 ರಿಂದ 12 ಲಕ್ಷ ಭಕ್ತರು ಬರುವ ನಿರೀಕ್ಷೆಯಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಸನಾಂಬ ದೇವಿಯ ದರ್ಶನ ಸಮಯ ಹಾಗೂ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.
ನ.15ರಂದು ಮಧ್ಯಾಹ್ನ 12ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗುವುದು. ಅಂದು ಕೂಡ ಭಕ್ತರ ದರ್ಶನಕ್ಕೆ ಅವಕಾಶ ಇರೋದಿಲ್ಲ. ಈ ಮೂಲಕ ಮೊದಲ ದಿನವಾದ ಇಂದು, ಕೊನೆಯ ದಿನವಾದ ನ.15ರಂದು ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರುವುದಿಲ್ಲ