Share this news

ಬೆಂಗಳೂರು: ವಿಶೇಷಚೇತನರಿಗೆ ಪ್ರಸಕ್ತ ಸಾಲಿನಲ್ಲಿ 4 ಸಾವಿರ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅವರು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಭಾನುವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆ-2023 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 13 ಲಕ್ಷದ 24 ಸಾವಿರದ 205 ವಿಕಲಚೇತನರಿದ್ದಾರೆ. ವಿಕಲಚೇತನರು ಸಮಾಜಕ್ಕೆ ಹೊರೆ ಅಲ್ಲ. ಅವರೂ ಕೂಡ ಬೇರೆಯವರಂತೆ ಈ ಸಮಾಜದಲ್ಲಿ ಎಲ್ಲಾ ಅವಕಾಶಗಳನ್ನು ಪಡೆದು ಉದ್ಯೋಗ, ಬದುಕಿಗೆ ಹಕ್ಕುಗಳನ್ನು ಪಡೆದಿದ್ದಾರೆ. ವಿಕಲಚೇತನರಿಗೆ ಶಿಕ್ಷಣ ಉದ್ಯೋಗಗಳಲ್ಲಿ ಸಮಾನ ಅವಕಾಶ ದೊರಕಿಸುವುದು ಸರ್ಕಾರದ ಕರ್ತವ್ಯ ಎಂದರು.


ಇತ್ತೀಚೆಗೆ ನಡೆಸಲಾದ ಜನಸ್ಪಂದನ ಕಾರ್ಯಕ್ರಮಕ್ಕೆ ಬಹಳಷ್ಟು ಸಂಖ್ಯೆಯಲ್ಲಿ ವಿಕಲಚೇತನರು ಆಗಮಿಸಿದ್ದರು. ಉದ್ಯೋಗ, ಶಿಕ್ಷಣ ಹಾಗೂ ವಾಹನ ಖರೀದಿಗೆ ನೆರವು ಸೇರಿದಂತೆ ಹಲವು ಬೇಡಿಕೆಗಳಿಗೆ ಸಂಬಧಪಟ್ಟ ಇಲಾಖೆಯು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು 2 ಕೋಟಿ ವೆಚ್ಚದಲ್ಲಿ ಏಳು ಜಿಲ್ಲೆಗಳಲ್ಲಿ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಕಲಚೇತನರ ಶೈಕ್ಷಣಿಕ, ವೈದ್ಯಕೀಯ, ಪುನರ್ವಸತಿ, ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿಗಾಗಿ 258.27 ಕೋಟಿ ರೂ. ಇಡಲಾಗಿದೆ. ಮರಣ ಹೊಂದಿದ ವಿಕಲಚೇತನರಿಗೆ ಪರಿಹಾರವನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವಿಕಲಚೇತನರು ಕ್ರೀಡೆಯೂ ಸೇರಿದಂತೆ ಎಲ್ಲ ರಂಗಗಳಲ್ಲಿ ಅಪ್ರತಿಮ ಸಾಧನೆ ತೋರುತ್ತಿದ್ದಾರೆ. ಆದ್ದರಿಂದ ವಿಕಲಚೇತನರು ಸಮಾಜಕ್ಕೆ ಹೊರೆ ಎನ್ನುವ ಸಮಾಜದಲ್ಲಿರುವ ಭಾವನೆಯನ್ನು ದೂರ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಹೇಳಿದರು
ವಿಕಲಚೇತನರ ಅಭ್ಯುದಯಕ್ಕಾಗಿ ಬಜೆಟ್ ನಲ್ಲಿ 284.27 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ಆರು ತಿಂಗಳಲ್ಲಿ ಇಲಾಖೆ ಮೂಲಕ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಮುಖ್ಯವಾಗಿ ವಿಕಲಚೇತನರ ಪಾಲಕರು, ಶಿಕ್ಷಕರು ಸೇವೆ ಅನನ್ಯ. ಅವರ ಬೇಡಿಕೆಗಳ ಬಗ್ಗೆ ಇಲಾಖೆಗೆ ಸಹಾನುಭೂತಿ ಇದ್ದು, ಬರುವಂತಹ ದಿನಗಳಲ್ಲಿ ಅವರ ಬೇಡಿಕೆಗಳಿಗೆ ಬೆಳಕು ಚೆಲ್ಲುವ ಕೆಲಸವನ್ನು ಸರ್ಕಾರ ಮಾಡಲಿದೆ ವಿಕಲಚೇತನರ ಮೇಲೆ ದೇವರಿಗೆ ವಿಶೇಷವಾದ ಪ್ರೀತಿ. ವಿಕಲಚೇತನರೆಂದರೆ ಅಸಾಧರಣಾ ಪ್ರತಿಭೆಗಳು. ಎಲ್ಲ ಇದ್ದರವರಲ್ಲಿ ಇರಲಾರದ ಕಲೆ ಪ್ರತಿಭೆ ವಿಶೇಷಚೇತನರಲ್ಲಿದೆ. ಇಂದು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ವಿಶೇಷವಾಗಿ ಕ್ರೀಡೆಯಲ್ಲಿ ನಾಡಿಗೆ, ದೇಶಕ್ಕೆ ದೊಡ್ಡ ಹೆಸರು ತಂದುಕೊಡುವ ಮೂಲಕ ದೊಡ್ಡ ದೊಡ್ಡ ಸಾಧನೆ ಮಾಡುತ್ತಿದ್ದಾರೆ. ಮತ್ತಷ್ಟು ಸಾಧನೆ ಮಾಡಲು ಸರ್ಕಾರ ಎಲ್ಲ ರೀತಿಯ ಪ್ರೊತ್ಸಾಹ ನೀಡಲಿದೆ ಎಂದು ಸಚಿವರು ಹೇಳಿದರು.
ಇದೇ ವೇಳೆ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಕಲಚೇತನರಿಗೆ, ಸಂಸ್ಥೆಗಳಿಗೆ ಹಾಗೂ ವಿಶೇಷ ಶಿಕ್ಷಕರಿಗೆ ಪ್ರಸಕ್ತ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವ ಎಚ್. ಎಂ. ರೇವಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಎನ್. ಸಿದ್ದೇಶ್ವರ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ, ಕರ್ನಾಟಕ ಬೌದ್ಧಿಕ ವಿಕಲಚೇತನ ಮಕ್ಕಳ ಪಾಲಕರ ಸಂಸ್ಥೆಯ ಮಾಜಿ ಅಧ್ಯಕ್ಷ ಜೆ.ಪಿ. ಗಡ್ಕರಿ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *