ಸುಳ್ಯ: ವಿದೇಶದಲ್ಲಿರುವ ಪತಿ ವಾಟ್ಸಪ್ ಸಂದೇಶದ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಸುಳ್ಯ ಜಯನಗರದಲ್ಲಿ ನಡೆದಿದೆ.
ಕೇರಳ ತ್ರಿಶೂರ್ ಮೂಲದ ಅಬ್ದುಲ್ ರಶೀದ್ ತನ್ನ ಪತ್ನಿಗೆ ವಾಟ್ಸಪ್ ಮೂಲಕ ತಲಾಖ್ ನೀಡಿದ್ದು ಈ ಬಗ್ಗೆ ಪತ್ನಿ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಬ್ದುಲ್ ರಶೀದ್ ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಯುವತಿಯನ್ನು ವಿವಾಹವಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ವಿವಾಹದ ಬಳಿಕ ಮೊದಲು ಪತ್ನಿಯನ್ನು ವಿದೇಶಕ್ಕೆ ಕರೆಸಿಕೊಂಡಿದ್ದ ಅವರು ಬಳಿಕ ಎರಡನೇ ಮಗುವಿನ ಹೆರಿಗೆಗಾಗಿ ಪತ್ನಿಯನ್ನು ಸುಳ್ಯದ ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದ್ದರು. ಕಳೆದ ಆರು ತಿಂಗಳಿನಿಂದ ದಂಪತಿ ಮಧ್ಯೆ ಕಲಹ ಉಂಟಾಗಿದ್ದು ಸಂಬಂಧಿಕರು ಹಿರಿಯರು ಮಧ್ಯಪ್ರವೇಶಿಸಿ ಸರಿಪಡಿಸಲು ಯತ್ನಿಸಿದ್ದರು. ಆದರೆ ಯಾವುದನ್ನು ಕೇಳದೆ ಪತಿ ಪತ್ನಿಯ ಮೊಬೈಲ್ ಗೆ ಮೂರು ತಲಾಖ್ ನ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ .
ಇದೀಗ ಮಹಿಳೆ ತನಗೆ ನ್ಯಾಯ ಕೊಡಿಸುವಂತೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.













