ಬೆಂಗಳೂರು: ವಿಧಾನಪರಿಷತ್ನ ಮೂರು ಸ್ಥಾನಗಳಿಗೆ ಜೂನ್ 30ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಸೋಮವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಬಿಜೆಪಿ ತ್ಯಜಿಸಿ ಕಾಂಗ್ರೆಸ್ಗೆ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ಜಗದೀಶ ಶೆಟ್ಟರ್ಗೆ ಟಿಕೆಟ್ ನೀಡಲಾಗಿದೆ. ಎನ್ಎಸ್ ಬೋಸರಾಜು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ತಿಪ್ಪಣ್ಣ ಕಮಕನೂರ್ ಅವರಿಗೂ ಟಿಕೆಟ್ ಘೋಷಣೆ ಮಾಡಲಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮಂಗಳವಾರ (ಜೂನ್ 20) ಕೊನೆಯ ದಿನವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ.
ಜೂನ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 23 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್ 30 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಶಾಸಕರು ಮತದಾನ ಮಾಡಲಿದ್ದಾರೆ. ಆ ನಂತರ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.
ಜಗದೀಶ್ ಶೆಟ್ಟರ್ ಅವರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲನುಭವಿಸಿದ್ದರು. ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಲಾಗಿತ್ತು. ಕಾಂಗ್ರೆಸ್ ಸರ್ಕಾರದ ಪೂರ್ಣಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹುಬ್ಬಳ್ಳಿಗೆ ತೆರಳಿ ಶೆಟ್ಟರ್ ಅವರ ಜತೆ ಮಾತುಕತೆ ನಡೆಸಿದ್ದರು. ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನೂ ನೀಡಿದ್ದರು.