ಅಹಮದಾಬಾದ್: ಶನಿವಾರ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋಲನ್ನಪ್ಪುವ ಮೂಲಕ ತೀವೃ ಮುಖಭಂಗ ಅನುಭವಿಸಿದೆ.
ಗುಜರಾತಿನ ಅಹಮದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಭಾರತದ ಪ್ರಖರ ಬೌಲಿಂಗ್ ದಾಳಿಗೆ ಪಾಕ್ ಬ್ಯಾಟರ್ ಗಳು ರನ್ ಗಳಿಸಲು ತಿಣುಕಾಡಿದರು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಪಾಕ್ ತಂಡದ ಆರಂಭಿಕರಾಗಿ ಅಬ್ದುಲ್ಲಾ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಕ್ರೀಸಿಗಿಳಿದು 41 ರನ್ ಗಳಿಸಿದ ಬಳಿಕ ಶಫೀಕ್ ವಿಕೆಟ್ ಕಳೆದುಕೊಂಡ ಬಾಬರ್ ಆಝಮ್ ಗೆ ಜತೆಯಾದ ಇಮಾಮ್ ಉಲ್ ಹಕ್ 73 ರನ್ ಜತೆಯಾಟವಾಡಿ 36 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.ಇದಾದ ಬಳಿಕ ಬಾಬರ್ ಹಾಗೂ ಮೊಹಮ್ಮದ್ ರಿಜ್ವಾನ್ ಉತ್ತಮ ಜತೆಯಾಟವಾಡಿ ಬೃಹತ್ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದರು ಆದರೆ ಬಾಬರ್ ಹಾಗೂ ರಿಜ್ವಾನ್ ಔಠಾದ ಬಳಿಕ ಪಾಕಿಸ್ತಾನ ಪತನ ಆರಂಭವಾಗಿತ್ತು. ಒಂದು ಹಂತದಲ್ಲಿ 153 ರನ್ನುಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ತಂಡ ಭಾರತ ತಂಡ ವೇಗದ ಘಾತಕ ಬೌಲಿಂಗ್ ದಾಳಿಗೆ ಕೇವಲ 36 ರನ್ನು ಗಳಿಸುವುವ ಮೂಲಕ 191ಕ್ಕೆ ಆಲೌಟ್ ಆಗಿ ತೀವೃ ಮುಖಭಂಗ ಅನುಭವಿಸಿತು.
ಪಾಕಿಸ್ತಾನ ನೀಡಿದ ಜುಜುಬಿ ಮೊತ್ತವನ್ನು ಬೆನ್ನಟ್ಟಿದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ಪಾಕಿಸ್ತಾನ ಬೌಲರ್ ಗಳ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸ್ ಬಾರಿಸಿ 86 ರನ್ ಗಳಿಸಿ ಔಟಾದರೆ, ಆರಂಭಿಕ ಬ್ಯಾಟರ್ ಗಿಲ್ ಹಾಗೂ ವನ್ ಡೌನ್ ಬ್ಯಾಟರ್ ಕೊಹ್ಲಿ ತಲಾ 16 ರನ್ನುಗಳಿಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಜತೆಗೂಡಿ ಭಾರತಕ್ಕೆ ಅಮೋಘ ಜಯವನ್ನು ತಂದಿತ್ತರು.
ಪಾಕಿಸ್ತಾನದ ಪರ ಶಾಹೀನ್ ಅಫ್ರಿದಿ 2 ವಿಕೆಟ್ ಗಳಿಸಿದರೆ ಹಸನ್ ಆಲಿ ಒಂದು ವಿಕೆಟ್ ಪಡೆದರು.