ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಗುಜರಾತಿನ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಇಂದು ಮಧ್ಯಾಹ್ನ ಆರಂಭವಾಗಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಭಾರತಕ್ಕೆ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶ ಒದಗಿಬಂದಿದ್ದು,ದೇಶದಾದ್ಯಂತ ಕೋಟ್ಯಾಂತರ ಕ್ರೀಡಾಪ್ರೇಮಿಗಳು ಭಾರತ ಕಪ್ ಗೆಲ್ಲಬೇಕೆಂದು ಹಾರೈಸಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡಗಳ ನಡುವೆ ಪ್ರಶಸ್ತಿಗಾಗಿ ಅಂತಿಮ ಹಣಾಹಣಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಸಮಾರೋಪ ಸಮಾರಂಭ ಆಯೋಜನೆ ಮಾಡಲಿದೆ. ಇದರಲ್ಲಿ ಬಾಲಿವುಡ್ ತಾರೆಯರು ನೃತ್ಯ ಮಾಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ತಂಡವು ತಮ್ಮ ವೈಮಾನಿಕ ಕೌಶಲ್ಯಗಳನ್ನು ಪ್ರಸ್ತುತಪಡಿಸಲಿದೆ.ಈಗಾಗಲೇ ಸಾವಿರಾರು ಕ್ರಿಕೆಟ್ ಪ್ರೇಮಿಗಳು, ಆಸಕ್ತರು ಅಹಮದಾಬಾದ್ಗೆ ತೆರಳುತ್ತಿದ್ದಾರೆ. ದುಬಾರಿ ಕ್ರಿಕೆಟ್ ಪಂದ್ಯಾವಳಿಗೆ 35 ಸಾವಿರದಿಂದ 1.85 ಲಕ್ಷ ರೂಪಾಯಿಗಳವರೆಗೆ ಹಣ ತೆತ್ತು ಟಿಕೆಟ್ ಖರೀದಿ ಮಾಡಿದ್ದಾರೆ. ವಿಮಾನದಲ್ಲಿ ಬೆಂಗಳೂರಿನಿಂದ ಅಹಮದಾಬಾದ್ಗೆ ಹೋಗಿ ಬರಲು 70ರಿಂದ 90 ಸಾವಿರ ನೀಡಿ ಟಿಕೆಟ್ ಬುಕ್ ಮಾಡಿದ್ದಾರೆ. ಅಲ್ಲಿ ಉಳಿದುಕೊಳ್ಳಲು ಹೋಟೆಲ್ ರೂಮ್ ಗಳ ಬೆಲೆ ಹತ್ತು ಪಟ್ಟು ಹೆಚ್ಚಾಗಿದೆ. ಸಣ್ಣ ಸಣ್ಣ.ಹೋಟೆಲ್ ಗಳಲ್ಲಿ ಒಂದು ರೂಂಗೆ 15 ರಿಂದ 20 ಸಾವಿರ ನಿಗದಿಯಾಗಿದೆ. ಸ್ಟಾರ್ ಹೋಟೆಲ್ಗಳಲ್ಲಿ 35 ಸಾವಿರದಿಂದ 1.50 ಲಕ್ಷ ರೂಪಾಯಿಗಳವರೆಗೆ ಬೇಡಿಕೆಯಿದೆ.
ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ
ಬೆಂಗಳೂರಿನಲ್ಲಿ ಪಂದ್ಯ ವೀಕ್ಷಿಸುವವರ ಉತ್ಸಾಹಕ್ಕೇನೂ ಭಂಗ ಬಂದಿಲ್ಲ. ಅನೇಕ, ಹೋಟೆಲ್, ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್, ಪಬ್ ಗಳಲ್ಲಿ ದೊಡ್ಡ ದೊಡ್ಡ ಪರದೆಗಳ ಮೂಲಕ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಕಳೆದ ಮೂರು ದಿನಗಳಿಂದ ಬಾರ್, ಪಬ್, ಕ್ಲಬ್ ಗಳಲ್ಲಿ ರಿಸರ್ವೇಶನ್ಗೆ ಬೇಡಿಕೆ ಆರಂಭವಾಗಿದೆ. ಈ ಪಂದ್ಯ ವೀಕ್ಷಿಸಲು ಆಗಮಿಸುವ ಕ್ರಿಕೆಟ್ ಪ್ರೇಮಿಗಳಿಗಾಗಿ ವಿಶೇಷ ಖಾದ್ಯಗಳನ್ನು ಸಿದ್ದಪಡಿಸುತ್ತಿದ್ದೇವೆ ಎಂದು ಹಲವಾರು ಪಬ್ ಮತ್ತು ಕ್ಲಬ್ ಗಳ ವ್ಯವಸ್ಥಾಪಕರು ಹೇಳುತ್ತಾರೆ.
ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯ ಪಬ್ ಹೋಟೆಲ್ ಮತ್ತು ಕ್ಲಬ್ಗಳ ಟಿಕೆಟ್ ಸೋಲ್ಡ್ ಔಟ್ ಆಗಿರುವುದಾಗಿ ತಿಳಿದು ಬಂದಿದೆ. ಗ್ರಾಹಕರನ್ನು ಆಕರ್ಷಿಸಲು ಹೋಟೆಲ್ ಪಬ್ ಗಳು ಅನೇಕ ತಂತ್ರಗಳ ಮೊರೆ ಹೋಗಿವೆ. ಮುಖದ ಮೇಲೆ ಭಾರತದ ಬಾವುಟದ ಚಿತ್ರ ಬಿಡಿಸುವುದು, ನೆಚ್ಚಿನ ಆಟಗಾರರ ಟೀ ಶರ್ಟ್ ನೀಡುವುದು, ರಿಟರ್ನ್ ಗಿಫ್ಟ್, ಕ್ವಿಜ್ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕೇವಲ ಹೊಟೇಲ್, ಪಬ್ ಮತ್ತು ಕ್ಲಬ್ ಗಳಿಗೆ ಮನರಂಜನೆ ಸೀಮಿತವಾಗಿಲ್ಲ. ಅಪಾರ್ಟ್ ಮೆಂಟ್ ನಿವಾಸಿಗಳು ಹಣ ಸಂಗ್ರಹಿಸಿ ವಿಶೇಷ ಎಲ್ ಇಡಿ ಪರದೆಗಳನ್ನು ಅಳವಡಿಸಲು ನಿರ್ಧರಿಸಿದ್ದಾರೆ.
ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಮೋದಿ: ಇಂದು ನಡೆಯುವ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಖುದ್ದು ಅಹಮದಾಬಾದ್ ನ ಸ್ಟೇಡಿಯಂಗೆ ತೆರಳಿ ವೀಕ್ಷಿಸಲಿದ್ದಾರೆ.
ಉಭಯ ತಂಡಗಳ ಆಟಗಾರರ ವಿವರ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್.