ಮುಂಬಯಿ: ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆದ್ದು ಸೋಲಿಲ್ಲದ ಸರದಾರ ಎನ್ನಿಸಿಕೊಂಡಿರುವ ಭಾರತ ಸೆಮಿಫೈನಲ್ಸ್ ನಲ್ಲೂ ಗೆಲುವಿನ ಅಭಿಯಾನ ಮುಂದುವರಿಸುವ ಮೂಲಕ ಫೈನಲ್ ಗೆ ಲಗ್ಗೆಯಿಟ್ಟಿದೆ.
ಬುಧವಾರ ಮುಂಬಯಿ ನ ವಾಂಖೇಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್ ತಂಡವನ್ನು 70 ರನ್ನುಗಳಿಂದ ಸೋಲಿಸಿ ಫೈನಲ್ ಗೆ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಗೆ ಇಳಿದ ನ್ಯೂಜಿಲೆಂಡ್ ಆರಂಭದಲ್ಲಿ ಭಾರತ ಮೇಲುಗೈ ಸಾಧಿಸಿದ್ದರೂ, ಬಳಿಕ ಮೊಹಮ್ಮದ್ ಶಮಿ ಮಾರಕ ದಾಳಿಯಿಂದ ಪಂದ್ಯ ಭಾರತದತ್ತ ವಾಲಿತು. ಡ್ಯಾರೆಲ್ ಮಿಶೆಲ್ ಅವರ ಶತಕ, ನಾಯಕ ವಿಲಿಯಮ್ಸನ್ ಅವರ ಅರ್ಧ ಶತಕದ ಹೊರತಾಗಿಯೂ ಭಾರತದ ಸಂಘಟಿತ ದಾಳಿಯ ಎದುರು ನ್ಯೂಜಿಲೆಂಡ್ ಸೋಲಿಗೆ ಶರಣಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರ ಭರ್ಜರಿ ಬ್ಯಾಟಿಂಗ್ ನಿಂದ ಉತ್ತಮ ಆರಂಭ ಪಡೆಯಿತು. ಶುಭಮನ್ ಅವರು 80 ರನ್ನು ಗಳಿಸಿ ಗಾಯಾಳಾಗಿ ನಿವೃತ್ತಿ ಹೊಂದಿದರು. ಈ ಬಳಿಕ ಕ್ರೀಸ್ ಗೆ ಬಂದ
ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರ ಸ್ಪೋಟಕ ಬ್ಯಾಟಿಂಗ್ ನಿಂದ ಇಬ್ಬರೂ ಶತಕ ಗಳಿಸಿದರು. ಅಂತಿಮವಾಗಿ ಭಾರತ 397 ರನ್ ಗಳಿಸಿ ನ್ಯೂಜಿಲೆಂಡ್ ಗೆ 398 ರನ್ ಗುರಿ ನೀಡಿತ್ತು.
ಚೇಸಿಂಗ್ ಇಳಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದರು. 30 ರನ್ ಸಿಡಿಸುವಷ್ಟರಲ್ಲೇ ನ್ಯೂಜಿಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಶಮಿ ದಾಳಿಗೆ ಡೆವೋನ್ ಕಾನ್ವೆ ವಿಕೆಟ್ ಪತನಗೊಂಡಿತು. ಡೆವೋನ್ 13 ರನ್ ಸಿಡಿಸಿ ಔಟಾದರು. ಮತ್ತೆ ದಾಳಿ ಮುಂದುವರಿಸಿದ ಮೊಹಮ್ಮದ್ ಶಮಿ ಅದ್ಭುತ ಫಾರ್ಮ್‌ನಲ್ಲಿದ್ದ ರಚಿನ್ ರವೀಂದ್ರ ವಿಕೆಟ್ ಕಬಳಿಸಿದರು. ರಚಿನ್ 13 ರನ್ ಸಿಡಿಸಿ ನಿರ್ಗಮಿಸಿದರು. 39 ರನ್‌ಗೆ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆರಿಲ್ ಮಿಚೆಲ್ ಅವರ ಭರ್ಜರಿ ಜೊತೆಯಾಟವಾಡಿ ಭಾರತೀಯ ಬೌಲರ್ ಗಳನ್ನು ಮನಬಂದಂತೆ ಚಚ್ಚಿದರು.
ಡರಿಲ್ ಮಿಚೆಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದರು. ಇದು ಟೀಂ ಇಂಡಿಯಾಗೆ ಅಪಾಯಕ ಕರೆಗಂಟೆ ಬಾರಿಸಿತ್ತು. ವಿಲಿಯಮ್ಸನ್ ಹಾಗೂ ಮಿಚೆಲ್ ಜೊತೆಯಾಟದಿಂದ ನ್ಯೂಜಿಲೆಂಡ್ ಆತ್ಮವಿಶ್ವಾಸ ಹೆಚ್ಚಿತ್ತು. ಮತ್ತೆ ಮೊಹಮ್ಮದ್ ಶಮಿ ದಾಳಿ ಆರಂಭಗೊಂಡಿತು. ಇದರ ಪರಿಣಾಮ ನ್ಯೂಜಿಲೆಂಡ್ ದಾಖಲೆಯ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತ್ತು. ಕೇನ್ ವಿಲಿಯಮ್ಸನ್ 69 ರನ್ ಸಿಡಿಸಿ ನಿರ್ಗಮಿಸಿದರು.
ಮಿಚೆಲ್ ಹಾಗೂ ಕೇನ್ 181 ರನ್ ಜೊತೆಯಾಟ ಅಂತ್ಯಗೊಂಡಿತು. ವಿಲಿಯಮ್ಸನ್ ಬೆನ್ನಲ್ಲೇ ಟಾಮ್ ಲಾಥಮ್ ವಿಕೆಟ್ ಕಬಳಿಸಿದ ಶಮಿ, ಭಾರತಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟರು. ಇತ್ತ ಡೆರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಜೊತೆಯಾಟ ಆರಂಭಗೊಂಡಿತು. ಈ ಜೋಡಿಯನ್ನು ಜಸ್ಪ್ರೀತ್ ಬುಮ್ರಾ ಬ್ರೇಕ್ ಮಾಡಿದರು.
ಗ್ಲನ್ ಪಿಲಿಪ್ಸ್ 41 ರನ್ ಸಿಡಿಸಿ ಔಟಾದರು. ಮಾರ್ಕ್ ಚಂಪನ್ ಕೇವಲ 2 ರನ್ ಸಿಡಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಶತಕದ ಬಳಿಕವೂ ಅಬ್ಬರಿಸುತ್ತಿದ್ದ ಡರಿಲ್ ಮಿಚೆಲ್ ಭಾರತಕ್ಕೆ ಆತಂಕ ಹೆಚ್ಚಿಸುತ್ತಲೇ ಇದ್ದರು. ಆದರೆ ಮೊಹಮ್ಮದ್ ಶಮಿ 134 ರನ್ ಸಿಡಿಸಿ ಗಟ್ಟಿಯಾಗಿ ನಿಂತಿದ್ದ ಮಿಚೆಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ ಹಾಗೂ ಫರ್ಗ್ಯೂಸನ್ ವಿಕೆಟ್ ಕಬಳಿಸಿದ ಶಮಿ, ನ್ಯೂಜಿಲೆಂಡ್ ತಂಡವನ್ನು 48.5 ಓವರ್‌ಗಳಲ್ಲಿ 327 ರನ್‌ಗೆ ಆಲೌಟ್ ಮಾಡಿದರು. ಭಾರತ 70 ರನ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತು. 2011ರ ಬಳಿಕ ಭಾರತ ವಿಶ್ವಕಪ್ ಟೂರ್ನಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ಮೊಹಮ್ಮದ್ ಶಮಿ 7 ವಿಕೆಟ್ ಕಬಳಿಸಿ ಮಿಂಚಿದರು. ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಇನ್ನಿಂಗ್ಸ್ ನಲ್ಲಿ 50 ವಿಕೆಟ್ ಸಾಧನೆ ಮಾಡಿದ ಹೆಗ್ಗಳಿಕೆಗೆ ಶಮಿ ಪಾತ್ರರಾಗಿದ್ದಾರೆ. ಶಮಿ 17 ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಸಾಧನೆ ಮಾಡಿದ್ದಾರೆ.
ಇಂದು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಎರಡನೇ ಸೆಮಿಫೈನಲ್ಸ್ ನಡೆಯಲಿದ್ದು ,ಪಂದ್ಯದಲ್ಲಿ ಗೆದ್ದ ತಂಡವು ನವೆಂಬರ್ 19 ರಂದು ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ.