ಗುಜರಾತ್: ಅಹಮದಾಬಾದ್ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023ರ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ 6ನೇ ಬಾರಿ ಟ್ರೋಫಿ ಎತ್ತಿಹಿಡಿದಿದೆ.
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್, ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ನಿಂದ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 240 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.
ಟೀಂ ಇಂಡಿಯಾದಲ್ಲಿ ಈ ಬಾರಿ ಬ್ಯಾಟಿಂಗ್ ವೈಫಲ್ಯದಿಂದಲೇ ಸೋಲಾಗಿದೆ.ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್ ಬೇಜವಾಬ್ದಾರಿ ಆಟವಾಡಿದ ಪರಿಣಾಮ ಭಾರತ ಕನಿಷ್ಟ ಮೊತ್ತ ಗಳಿಸಿತು.ಅದರಲ್ಲೂ ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್ ಅವರಂತಹ ಆಟಗಾರ ಮಂಕಾಗಿದ್ದು ವೈಫಲ್ಯವೇ ಎನ್ನಬಹುದು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಕೂಡ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲರಾದರು. ಭಾರತ ಪರ ಬ್ಯಾಟ್ ಬೀಸಿದ ಆರಂಭಿಕ ಮತ್ತು ನಾಯಕ ರೋಹಿತ್ ಶರ್ಮಾ 31 ಎಸೆತಕ್ಕೆ 47 ರನ್ ಸಿಡಿಸಿ ಬೃಹತ್ ಮೊತ್ತ ಕಲೆಹಾಕುವಲ್ಲಿ ಹೊಣೆಗಾರಿಕೆ ವಹಿಸಲಿಲ್ಲ, ಇನ್ನು ಶುಭ್ಮನ್ ಗಿಲ್ 7 ಎಸೆತಕ್ಕೆ 4 ರನ್, ವಿರಾಟ್ ಕೊಹ್ಲಿ 63 ಎಸೆತಕ್ಕೆ 54 ರನ್, ಕೆ ಎಲ್ ರಾಹುಲ್ 107 ಎಸೆತಕ್ಕೆ 66 ರನ್, ರವೀಂದ್ರ ಜಡೇಜಾ 22 ಎಸೆತಕ್ಕೆ 9 ರನ್, ಸೂರ್ಯಕುಮಾರ್ 28 ಎಸೆತಕ್ಕೆ 18 ರನ್, ಮೊಹಮ್ಮದ್ ಶಮಿ 10 ಎಸೆತಕ್ಕೆ 6 ರನ್, ಜಸ್ಪ್ರೀತ್ ಬುಮ್ರ 3 ಎಸೆತಕ್ಕೆ 1 ರನ್, ಕುಲ್ದೀಪ್ ಯಾದವ್ 10 ಎಸೆತಕ್ಕೆ 10 ರನ್, ಮೊಹಮ್ಮದ್ ಸಿರಾಜ್ 8 ಎಸೆತದಲ್ಲಿ 9 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
ಅಂತಿಮವಾಗಿ ಆಸ್ಟ್ರೇಲಿಯಾ ಭಾರತದ ನೀಡಿದ ಜುಜುಬಿ ಮೊತ್ತವನ್ನು ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿ ವಿಶ್ವಕಪ್ ಮುಡಿಗೇರಿಸಿ ಭಾರತದ ವಿಶ್ವಕಪ್ ಕನಸನ್ನು ನುಚ್ಚುನೂರಾಗಿಸಿದೆ