ಕಾರ್ಕಳ: ಆಂಗ್ಲ ಮಾಧ್ಯಮ ಶಿಕ್ಷಣದ ಧಾವಂತದಲ್ಲಿ ಇಂದು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಒಂದು ಹರಸಾಹಸವಾಗಿದೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳ ಪೈಪೋಟಿಯ ನಡುವೆಯೂ ಕೆಲವೊಂದು ಸರ್ಕಾರಿ ಶಾಲೆಗಳು ಇಂದಿಗೂ ಸೀಮಿತ ಮೂಲಸೌಕರ್ಯಗಳನ್ನು ಬಳಸಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳಿಗಿAತಲೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಅಂತಹ ಕೆಲವೇಕೆಲವು ಸರ್ಕಾರಿ ಶಾಲೆಗಳ ಪೈಕಿ ಶತಮಾನದ ಇತಿಹಾಸವುಳ್ಳ ಕಾರ್ಕಳ ತಾಲೂಕಿನ ಕಲ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ನೂರು ಸಂವತ್ಸರಗಳನ್ನು ಪೂರೈಸಿ ಡಿಸೆಂಬರ್ 15 ಹಾಗೂ 16ರಂದು ಶತಮಾನೋತ್ಸವದ ಸಂಭ್ರಮಾಚರಣೆಗೆ ಸಜ್ಜಾಗಿದೆ.
1923ರಲ್ಲಿ ಸಣ್ಣ ಗುಡಿಸಲಿನಲ್ಲಿ ಆರಂಭವಾಗಿದ್ದ ಪುಟ್ಟ ಪುಟಾಣಿಗಳ ವಿದ್ಯಾದೇಗುಲವು ಇಂದು ಸುಸಜ್ಜಿತ ಶಾಲೆಯಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಶತಮಾನೋತ್ಸವ ಸಂಭ್ರಮಾಚರಣೆಯ ಹೊಸ್ತಿಲಿನಲ್ಲಿದೆ. ಕಲ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂರು ವರ್ಷಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಲು ಶಿಕ್ಷಕ ವೃಂದ, ಸ್ಥಳೀಯ ಶಿಕ್ಷಣಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು ಹಗಲಿರುಳೆನ್ನದೇ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಶತಮಾನೋತ್ಸವದ ಸವಿನೆನಪಿಗಾಗಿ ಒಟ್ಟು 1.50 ಕೋ.ರೂ ವೆಚ್ಚದ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಬಾಲವನ, ವಿಸ್ತಾರವಾದ ಸಭಾಂಗಣ, ವಾಚನಾಲಯ, ಆಧುನಿಕ ಪ್ರಯೋಗಾಲಯ,ಶಾಲಾ ಆವರಣ ಗೋಡೆ, ಶಾಲೆಯ ಪ್ರಾಂಗಣಕ್ಕೆ ಇಂಟರ್ ಲಾಕ್ ವ್ಯವಸ್ಥೆ, ಧ್ವಜಸ್ತಂಭ ಸೇರಿದಂತೆ ಹತ್ತುಹಲವು ಕಾಮಗಾರಿಗಳು ಕೊಡುಗೈ ದಾನಿಗಳ, ಹಳೆ ವಿದ್ಯಾರ್ಥಿಗಳ, ಉದ್ಯಮಿಗಳ ಸಹಕಾರದಿಂದ ಬಹುತೇಕ ಮುಕ್ತಾಯಗೊಂಡಿರುವುದು ದಾಖಲೆಯಾಗಿದೆ.
ಅಂಗನವಾಡಿಯಿAದ ಏಳನೇ ತರಗತಿಯವರೆಗೆ ಶಾಲೆಯಲ್ಲಿ ಒಟ್ಟು 150ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಕಾಪೋರೇಟ್ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಶಾಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಈ ಶಾಲೆಯ ಶಿಕ್ಷಕ ವರ್ಗದವರು ಹೇಳುತ್ತಾರೆ.
ಶತಮಾನೋತ್ಸವದ ಸವಿನೆನಪಿಗಾಗಿ ಹುತಾತ್ಮ ಯೋಧ ಕ್ಯಾ. ಎಂ.ವಿ ಪ್ರಾಂಜಲ್ ಪುತ್ಥಳಿ ಸ್ಥಾಪನೆ
ಶಾಲಾ ಮಕ್ಕಳಲ್ಲಿ ರಾಷ್ಟçಭಕ್ತಿ ಹಾಗೂ ಯೋದರ ಕುರಿತು ಗೌರವ ಹಾಗೂ ಮುಂದೆ ಸೇನೆಗೆ ಸೇರಲು ಮಕ್ಕಳಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಹಾಗೂ ಶತಮಾನೋತ್ಸವದ ಸವಿನೆನಪಿಗಾಗಿ ಇತ್ತೀಚೆಗೆ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕ್ಯಾ.ಎಂ.ವಿ ಪ್ರಾಂಜಲ್ ಅವರ ಕಂಚಿನ ಪುತ್ಥಳಿಯನ್ನು ಸ್ಥಾಪನೆಗೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಪುತ್ಥಳಿಯನ್ನು ಮುಂದಿನ ಜ.26ರಂದು ಗಣರಾಜ್ಯೋತ್ಸವದ ದಿನದಂದು ಅನಾವರಣಗೊಳಿಸಲಾಗುತ್ತದೆ.
ಡಿ.15 ಹಾಗೂ 16ರಂದು ನಡೆಯಲಿರುವ ಶತಮಾನೋತ್ಸವ ಸಮಾರಂಭದ ಆಚರಣೆಗೆ ಬಹುತೇಕ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ. ಡಿ 15ರಂದು ಮುಂಜಾನೆ ಧ್ವಜಾರೋಹಣ, ವೈಭವದ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಶೋಭಾಯಾತ್ರೆ, ಶತಮಾನೋತ್ಸವದ ಉದ್ಘಾಟನಾ ಸಮಾರಂಭ, ಗುರು ವಂದನೆ, ದಾನಿಗಳ ಸನ್ಮಾನ, ಗುರು ಸ್ತುತಿ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ 16ರಂದು ‘ಪ್ರಾಥಮಿಕ ಶಿಕ್ಷಣ ಅಂದು, ಇಂದು ಮತ್ತು ಮುಂದು’ ಈ ವಿಷಯದ ಮೇಲೆ ಶಿಕ್ಷಕ ಸಂಘಗಳನ್ನು ಒಳಗೊಂಡ ವಿಚಾರ ಗೋಷ್ಠಿ ನಡೆಯಲಿದೆ.ಬಳಿಕ ಸಂಜೆ6.30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನೂತನ ಸಭಾಭವನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಮುಂತಾದವರು ಉಪಸ್ಥಿತರಿರಲಿದ್ದಾರೆ.
ಸ್ಮರಣ ಸಂಚಿಕೆ ಬಿಡುಗಡೆ, ಸಾಧಕರ ಸನ್ಮಾನ, ದಾನಿಗಳಿಗೆ ಸನ್ಮಾನ ,ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಈ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಶೆಟ್ಟಿ, ಗುರ್ಮೆದ ಬೈಲು, ಮುಂಬೈ ಸಮಿತಿ ಅಧ್ಯಕ್ಷ ಮಣ್ಣಬೆಟ್ಟು ಮನೋಹರ್ ಎನ್ ಶೆಟ್ಟಿ, ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಂದಳಿಕೆ ರವಿದಾಸ ಕುಡ್ಡ, ಶಾಲೆಯ ಮುಖ್ಯ ಶಿಕ್ಷಕಿ ಕಸ್ತೂರಿ ಎಸ್ ಒಳಗೊಂಡ ಶಿಕ್ಷಕ ವೃಂದ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಆಶಾ, ರವಿರಾಜ್ ಭಟ್, ವಿವಿಧ ಉಪಸಮಿತಿಗಳ ಸಂಚಾಲಕರು,ಪದಾಧಿಕಾರಿಗಳು ಶತಮಾನೋತ್ಸವದ ಆಚರಣೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಶಾಲೆಯ ಶತಮಾನೋತ್ಸವದ ಸುಸಂದರ್ಭದಲ್ಲಿ ಬಲಿಷ್ಠವಾದ ಪೂರ್ವ ವಿದ್ಯಾರ್ಥಿಗಳ ಸಂಘವು ರಚನೆಯಾಗಿದ್ದು ಶತಮಾನ ಕಂಡ ಶಾಲೆಯು ಇನ್ನಷ್ಟು ಸದೃಢವಾಗಿ ನಿಂತು ಬಡವಿದ್ಯಾರ್ಥಿಗಳ ಜ್ಞಾನ ದೇಗುಲವಾಗಿ ಕಂಗೊಳಿಸಲಿದೆ