ಮಂಗಳೂರು: ವಿಧಾನ ಸಭಾಧ್ಯಕ್ಷ ಹುದ್ದೆ ಕೇವಲ ಸಾಂವಿಧಾನಿಕ ಪೀಠದ ಹುದ್ದೆಯಾಗಿದೆಯೇ ಹೊರತು ಯಾವುದೇ ಜಾತಿ,ಧರ್ಮದ ಆಧಾರದಲ್ಲಿ ನಿರ್ಧಾರವಾಗಿಲ್ಲ,ಎಲ್ಲರೂ ಸಂವಿಧಾನಿಕ ಪೀಠಕ್ಕೆ ಗೌರವ ಕೊಡುತ್ತಾರೆಯೇ ಹೊರತು ನನಗೆ ವೈಯಕ್ತಿಕವಾಗಿ ನೀಡುವ ಗೌರವವಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.
ಸ್ಪೀಕರ್ ಸ್ಥಾನವನ್ನು ಯಾವುದೇ ರಾಜಕೀಯ ಜಾತಿ ಧರ್ಮದ ಆಧಾರದಲ್ಲಿ ನೋಡುವಂತಿಲ್ಲ. ಇದು ಎಲ್ಲವನ್ನೂ ಮೀರಿ ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನಮಾನ. ಎಲ್ಲರೂ ಗೌರವ ಕೊಡುವುದು ನನಗಲ್ಲ. ಸಂವಿಧಾನ ಪೀಠಕ್ಕೆ, ಸಭಾಧ್ಯಕ್ಷ ಸ್ಥಾನಕ್ಕೆ’ ಎನ್ನುವ ಮೂಲಕ ಯು.ಟಿ.ಖಾದರ್ ಸಚಿವ ಜಮೀರ್ ಅಹಮದ್ ಖಾನ್ ಅವರ ಮುಸ್ಲಿಂ ಸ್ಪೀಕರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಶನಿವಾರ ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾವು(ಮುಸ್ಲಿಮರು) ಮುಸ್ಲಿಂ ಸಮುದಾಯದ ಸ್ಪೀಕರ್ಗೆ ಬಿಜೆಪಿ ಶಾಸಕರು ಎದ್ದುನಿಂತು ಕೈ ಮುಗಿದು ನಮಸ್ಕರಿಸುವಂತೆ ಮಾಡಿದ್ದೇವೆ, ನೀವೂ ಕೂಡ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಗೆಲ್ಲಿಸಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕೆಂದು ಜಮೀರ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಡಿದ್ದ ಭಾಷಣಕ್ಕೆ ಪ್ರತಿಕ್ರಿಯಿಸಿ, ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವವರು ಅದರ ಗೌರವವನ್ನು ಉಳಿಸಬೇಕು. ಜಮೀರ್ ಅವರ ಹೇಳಿಕೆಗೆ ನಾನು ಏನೂ ಹೇಳಲು ಬಯಸುವುದಿಲ್ಲ, ಜಾತಿಯ ಆಧಾರದಲ್ಲಿ ನನ್ನನ್ನು ಪೀಠದಲ್ಲಿ ಕುಳ್ಳಿರಿಸಲಿಲ್ಲ. ಅರ್ಹತೆಗೆ ಅನುಗುಣವಾಗಿ ಸ್ಥಾನವನ್ನು ನೀಡಿದ್ದಾರೆ.ಎಲ್ಲರಿಗೆ ಗೌರವ ನೀಡಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಇಂತಹ ಹೇಳಿಕೆಗಳು ಸರಿಯಲ್ಲ ಎಂದರು








