ಬೆಂಗಳೂರು: ಗುತ್ತಿಗೆದಾರನಿಂದ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ, ಇಂದು ನ್ಯಾಯಾಲಯವು ಏಪ್ರಿಲ್ 11ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿದ್ದರು. ಅವರ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಕೆಲ ಕಾಲ ಹೊರಗಿದ್ದರು.
ಈ ಬಳಿಕ ನಿರೀಕ್ಷಾಣಾ ಜಾಮೀನು ಅವಧಿ ಮುಕ್ತಾಯಗೊಂಡ ನಂತರ ಹೈಕೋರ್ಟ್ ನಿರೀಕ್ಷಾಣಾ ಜಾಮೀನು ರದ್ದುಗೊಳಿಸಿತ್ತು. ಈ ಬಳಿಕ ಲೋಕಾಯುಕ್ತ ಪೊಲೀಸರಿಂದ ಅವರನ್ನು ಚೆನ್ನಗಿರಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವೇಳೆ ಮಾರ್ಗಮಧ್ಯೆ ಬಂಧಿಸಲಾಗಿತ್ತು.ಕೋರ್ಟ್ ಗೆ ಹಾಜರು ಪಡಿಸಿ, ತಮ್ಮ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ಕೇಳಿಕೊಂಡಿದ್ದರು.
ಈ ಮನವಿಗೆ ಪುರಸ್ಕರಿಸಿದ್ದ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಹೆಚ್ಚಿನ ವಿಚಾರಣೆಗಾಗಿ ನೀಡಿತ್ತು.ಇಂದು ಲೋಕಾಯುಕ್ತ ಪೊಲೀಸರಿಗೆ ನೀಡಿದ್ದ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿತ್ತು.
ಈ ಬಗ್ಗೆ ಇಂದು ವಿಚಾರಣೆ ನಡೆಸಿದ ನ್ಯಾಯಪೀಠವು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಏಪ್ರಿಲ್ 11ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಜೈಲೇ ಗತಿ ಎನ್ನುವಂತೆ ಆಗಿದೆ.