ಕಾರ್ಕಳ: ಶಿಕ್ಷಕರ ಕೊರತೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಇದರ ಜತೆಗೆ ನಾಯಿಕೊಡೆಗಳಂತೆ ಅಲ್ಲಲ್ಲಿ ತೆರೆಯುವ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಭಾರಾಟೆಯಿಂದ ಗ್ರಾಮೀಣ ಭಾಗದ ಸಾಕಷ್ಟು ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಇದೀಗ ಉಡುಪಿ ಜಿಲ್ಲಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಮಂಗಳಾನಗರ ಎಂಬಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಪೋಷಕರು ಮಕ್ಕಳನ್ನು ಶಾಲೆಲೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಪರಿಣಾಮ ಶಾಲೆ ಮುಚ್ಚುವ ಹಂತ ತಲುಪಿದೆ.

ಅಜೆಕಾರು ಮಂಗಳಾನಗರದಲ್ಲಿರುವ 1ರಿಂದ 5ನೇ ತರಗತಿ ಶಾಲೆಯಲ್ಲಿ ಒಟ್ಟು 13 ಮಕ್ಕಳಿದ್ದು ಈ ಶಾಲೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಇಬ್ಬರು ಶಿಕ್ಷಕಿಯರಿದ್ದರು. ಆದರೆ 2021ರ ಅಂಕಿಅAಶದ ಪ್ರಕಾರ ಕೇವಲ 10 ಮಕ್ಕಳಿದ್ದರು ಎನ್ನುವ ಕಾರಣಕ್ಕೆ ಇಲಾಖಾ ನಿಯಮದಂತೆ ಪ್ರಸ್ತುತ ವರ್ಷದಿಂದ ಒಬ್ಬ ಶಿಕ್ಷಕಿಯನ್ನು ವರ್ಗಾವಣೆ ಮಾಡಲಾಗಿದೆ.ಇದೀಗ 13 ಮಕ್ಕಳಿದ್ದರೂ ನಿಯಮದ ಪ್ರಕಾರ ಇಬ್ಬರು ಶಿಕ್ಷಕರ ನೇಮಕವಾಗಬೇಕು ಆದರೆ ಶಿಕ್ಷಣ ಇಲಾಖೆ ಹಳೆಯ ಅಂಕಿಅAಶವನ್ನು ಪರಿಗಣಿಸಿದ್ದ ಪರಿಣಾಮ ಮಕ್ಕಳ ಸಂಖ್ಯೆ ಆಧಾರದಲ್ಲಿ ಈ ಶಾಲೆಗ ಒಬ್ಬ ಶಿಕ್ಷಕಿಯನ್ನು ಮಾತ್ರ ನೀಡಲಾಗಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಧಾರಕ್ಕೆ ಮಕ್ಕಳ ಪೋಷಕರು ತೀವೃ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಎರಡು ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ ಕಡೆಯಿದ್ದರೂ ಇದೀಗ ಹೆಚ್ಚಳವಾಗಿದೆ ಆ ನೆಲೆಯಲ್ಲಿ ಹೆಚ್ಚುವರಿ ಶಿಕ್ಷಕರ ನೇಮಕವಾಗಬೇಕು ಆಥವಾ ಅತಿಥಿ ಶಿಕ್ಷಕರನ್ನಾದರೂ ನೇಮಿಸಿಬೇಕು ಕೇವಲ ಒಬ್ಬ ಶಿಕ್ಷಕಿಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಆದ್ದರಿಂದ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸುತ್ತೇವೆ ಎಂದು ಪಟ್ಟು ಹಿಡಿದ್ದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ಈ ಹಿಂದಿನ ನಿಯಮದ ಪ್ರಕಾರ ಮಂಗಳಾನಗರ ಶಾಲೆಯಲ್ಲಿ 10 ಕ್ಕಿಂತ ಕಡಿಮೆ ಮಕ್ಕಳಿದ್ದ ಕಾರಣಕ್ಕೆ ಒಬ್ಬ ಶಿಕ್ಷಕರನ್ನು ನೀಡಲಾಗಿದೆ, ಆದರೆ ಹಾಲಿ ವರ್ಷದಿಂದ ಮಕ್ಕಳ ಸಂಖ್ಯೆ ಏರಿಕೆಯಾಗಿರುವುದರಿಂದ ಇಲಾಖಾ ನಿಯಮಾವಳಿಯಂತೆ ಮುಂದಿನ ಡಿಸೆಂಬರ್ ಒಳಗಾಗಿ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿರುವ ಭರವಸೆ ಮೇರೆಗೆ ಕೊನೆಗೂ ಪೋಷಕರು ಒಪ್ಪಿದ್ದು ಮುಂದಿನ ಡಿಸೆಂಬರ್ ಒಳಗಾಗಿ ಶಿಕ್ಷಕರ ನೇಮಕಾತಿಯಾಗದಿದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಶಾಲೆಗಳ ಕುರಿತು ಎಲ್ಲಾ ಸರ್ಕಾರಗಳು ನಿರ್ಲಕ್ಷö್ಯ ಧೋರಣೆಯನ್ನೇ ಅನುಸರಿಸಿಕೊಂಡು ಬಂದಿರುವ ಕಾರಣದಿಂದಾಗಿ ಗ್ರಾಮೀಣ ಭಾಗದ ಅದೆಷ್ಟೋ ಶಾಲೆಗಳು ಇಂದು ಮೂಲಸೌಕರ್ಯವಿಲ್ಲದೇ ರೋಗಗ್ರಸ್ಥ ಶಾಲೆಗಳಾಗಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ. ಬಸ್ ಸೌಕರ್ಯವಿಲ್ಲದ ಗ್ರಾಮೀಣ ಬಡಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದು ಸುಪ್ರಿಂ ಕೋರ್ಟ್ ಸರ್ಕಾರಗಳಿಗೆ ಚಾಟಿ ಬೀಸಿದ್ದರೂ ಸರ್ಕಾರಗಳು ಮಾತ್ರ ಕಿವಿ ಹಾಕಿಕೊಳ್ಳದೇ ಪರೋಕ್ಷವಾಗಿ ಆಂಗ್ಲ ಮಾಧ್ಯಮ ಶಾಲೆಗಳ ಪರವಾಗಿ ನಿಂತಿದೆ ಎನ್ನುವ ಆರೋಪ ಗುಟ್ಟಾಗಿ ಉಳಿದಿಲ್ಲ. ಸರ್ಕಾರ ಬಡವರ ಮನೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ.
