ಮುಲ್ಕಿ: ವಿದ್ಯೆ ನಮ್ಮನ್ನು ಬಾಹ್ಯವಾಗಿ ರೂಪಿಸಿ ಬದುಕನ್ನು ನೀಡುತ್ತದೆ. ಕಲೆ ನಮ್ಮ ಅಂತರಂಗವನ್ನು ಪ್ರಚೋದಿಸಿ ಹೃದಯವನ್ನು ಅರಳಿಸುತ್ತದೆ. ಬಾಹ್ಯ ಹಾಗೂ ಅಂತರಂಗದ ವೃದ್ಧಿಯಿಂದ ಜೀವನ ಸಮೃದ್ಧವಾಗುತ್ತದೆ ಹಾಗೂ ಪ್ರಬುದ್ಧವಾಗುತ್ತದೆ. ಆ ಕಡೆಗೆ ಸಾಗುವ ಮನಸ್ಸು ವಿದ್ಯಾರ್ಥಿಗಳಿಗೆ ಆಗಲಿ, ಶಿಕ್ಷಣ ಮತ್ತು ನೃತ್ಯಕಲೆಯಿಂದ ಇದು ಸಾಧ್ಯವಾಗಲಿದೆ, ಜೀವನದ ಪರಿಪೂರ್ಣತೆಗಾಗಿ ನೃತ್ಯಕಲೆ ಪೂರಕವಾಗಬಲ್ಲದು ಎಂದು ಕಿನ್ನಿಗೋಳಿಯ ಶಿವಪ್ರಣಾಮ್ ನೃತ್ಯ ಸಂಸ್ಥೆಯ ನಿರ್ದೇಶಕರಾದ ಅನ್ನಪೂರ್ಣ ರಿತೇಶ್ ಶುಭ ಹಾರೈಸಿದರು.
ಅವರು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಈ ಶೈಕ್ಷಣಿಕ ವರ್ಷದ ಉಚಿತ ನೃತ್ಯ ತರಗತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಶಾರದಾ ಸೊಸೈಟಿಯ ಅಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೃತ್ಯಕಲೆ ನಮ್ಮ ಹೃದಯದ ಭಾಷೆ. ಈ ಕಲೆಯಲ್ಲಿ ಎಲ್ಲಾ ಶಿಕ್ಷಣವೂ ಇದೆ. ಹಾಗಾಗಿ ಶಿಕ್ಷಣದಲ್ಲಿ ನೃತ್ಯಕಲೆ ಇರಲೇಬೇಕು. ಇದರಿಂದ ಹೃದಯವಂತ ಸುಸಂಸ್ಕೃತ ವ್ಯಕ್ತಿಗಳ ನಿರ್ಮಾಣ ಸಾಧ್ಯವಾಗಿ ಮಾನವರಾಗಿ ಈ ಸಮಾಜದಲ್ಲಿ ಬದುಕಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಶಾರದಾ ಸೊಸೈಟಿಯ ಕೋಶಾಧಿಕಾರಿ ಭುವನಾಭಿರಾಮ ಉಡುಪ, ಶಾಲಾ ಸಂಚಾಲಕರಾದ ದೇವಪ್ರಸಾದ್ ಪುನರೂರು, ನೃತ್ಯ ತರಬೇತುದಾರರಾದ ಸುಧಾಕರ್ ಸುರತ್ಕಲ್ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲರಾದ ಜಿತೇಂದ್ರ ವಿ ರಾವ್ ಸ್ವಾಗತಿಸಿದರು. ಸಹ ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ ವಂದಿಸಿದರು.