ಶಿವಮೊಗ್ಗ:ಶಿವಮೊಗ್ಗದ ಶಾಂತಿನಗರದ ರಾಗಿಗುಡ್ಡ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಉದ್ರಿಕ್ತರ ಗುಂಪನ್ನು ಚದುರಿಸಲು ಸ್ಥಳಕ್ಕೆ ಕ್ಷಿಪ್ರ ಕಾರ್ಯಪಡೆ ಆಗಮಿಸಿದ್ದು,ಲಾಠೀಚಾರ್ಜ್ ಮಾಡಿ ಗುಂಪನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಲುವಾಗಿ ಪೊಲೀಸರು ಸೆಕ್ಷೆನ್ 144 ಜಾರಿ ಮಾಡಲಾಗಿದೆ.
ಕಟೌಟ್ ವಿಚಾರವಾಗಿ ನಿನ್ನೆ ರಾತ್ರಿ ಉದ್ವಿಗ್ನ ಸ್ಥಿತಿ?
ಹೌದು, ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್‌ಅ ಳವಡಿಸಲಾಗಿತ್ತು. ಈ ವೇಳೆ ಟಿಪ್ಪುವಿನ ಕಟೌಟ್ನ ಕೆಳಭಾಗದಲ್ಲಿ ಆಕ್ಷೇಪಾರ್ಹ ಬರಹ ಬರೆಯಲಾಗಿದ್ದ ಹಿನ್ನಲೆಯಲ್ಲಿ ಪೊಲೀಸರು ಬಿಳಿ ಬಣ್ಣವನ್ನು ಬಳಿದಿದ್ದರು. ಇದರಿಂದ ರೊಚ್ಚಿಗೆದ್ದ ರಾಗಿಗುಡ್ಡದ ಶಾಂತಿನಗರ ನಿವಾಸಿಗಳು, ಯಾಕೆ ಟಿಪ್ಪುವಿನ ಕಟೌಟ್ನ ಕೆಳಭಾಗದಲ್ಲಿರುವ ಚಿತ್ರಕ್ಕೆ ಬಿಳಿ ಬಣ್ಣ ಹಾಕಿದ್ದೀರಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಕಟೌಟ್ ಮೇಲೆ ಪೊಲೀಸರು ಹಚ್ಚಿದ್ದ ಬಿಳಿ ಬಣ್ಣದ ಮೇಲೆಯೇ ರಕ್ತದಲ್ಲಿ “ಶೇರ್ ಟಿಪ್ಪು” ಎಂದು ಮುಸ್ಲಿಂ ಯುವಕನೋರ್ವ ಬರೆದಿದ್ದಾನೆ ಎನ್ನಲಾಗಿದೆ.
ಈ ಘಟನೆ ಕುರಿತಂತೆ ಎಸ್ಪಿ ಮಿಥುನ್ ಕುಮಾರ್ ಮಾತನಾಡಿ,
ಕಟೌಟ್ ಗೆ ಬಣ್ಣ ಬಳಿದಿದ್ದರಿಂದ ಸ್ವಲ್ಪಮಟ್ಟಿನ ಗೊಂದಲ ಸೃಷ್ಟಿಯಾಗಿದ್ದು ಮುಸ್ಲಿಂ ಮುಖಂಡರ ಜತೆ ಮಾತುಕತೆ ನಡೆಸಲಾಗಿದ್ದು ಟಿಪ್ಪು ಕಟೌಟ್ ವಿವಾದಾತ್ಮಕವಾಗಿದ್ದ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಇದೇವೇಳೆ ಮಾತನಾಡಿದ ಅವರು, ಕಟ್ ಔಟ್ ವಿಚಾರವಾಗಿ ಗೊಂದಲ ಉಂಟಾಗಿತ್ತು. ಸ್ವಲ್ಪ ವಿವಾದಾತ್ಮಕವಾಗಿ ಕಟೌಟ್ ಇದ್ದಿದ್ದರಿಂದ ಅದಕ್ಕಾಗಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಅದಕ್ಕೆ ಕೆಲವರಿಂದ ವಿರೋಧ ಕೂಡ ವ್ಯಕ್ತವಾಗಿತ್ತು. ಆ ಸಮಯದಲ್ಲಿ ನೂರಕ್ಕೂ ಹೆಚ್ಚು ಜನ ಸೇರಿದ್ದರು. ನಾನೇ ಮುಂದೆ ನಿಂತು ಅವರಿಗೆ ಸಮಾಧಾನಪಡಿಸಿ ವಿಚಾರವನ್ನು ತಿಳಿಸಿದ್ದೇನೆ. ಅವರಿಗೆ ಈಗ ಮನವರಿಕೆ ಮಾಡಿಕೊಟ್ಟಿದ್ದೇವೆ. ಈಗ ಅವರೆಲ್ಲರೂ ನಮ್ಮ ಮಾತಿಗೆ ಒಪ್ಪಿಕೊಂಡಿದ್ದಾರೆ.
ಸಾರ್ವಜನಿಕರು ಕೂಡ ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು. ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಅದನ್ನ ನಮ್ಮ ಬಳಿಗೆ ತೆಗೆದುಕೊಂಡು ಬನ್ನಿ. ಈಗ ಪರಿಸ್ಥಿತಿ ಶಾಂತಿಯುತವಾಗಿದ್ದು ನಮ್ಮ ಕಂಟ್ರೋಲ್ ನಲ್ಲಿದೆ. ಕಳೆದ 15 ದಿನಗಳಿಂದ ಶಿವಮೊಗ್ಗದಲ್ಲಿ ನಾವು ಬಂದೋಬಸ್ತ್ ಮಾಡುತ್ತಿದ್ದೇವೆ. ಆರ್ಎಎಫ್ ಎರಡು ತುಕಡಿ, 12 ಡಿಎಆರ್, 2 ಕೆಎಸ್ಆರ್ಪಿ ತುಕಡಿ ಹಾಗೂ 2500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಎಲ್ಲಾ ರೀತಿಯ ಬಂದೋಬಸ್ತ್ ನಾವು ಮಾಡಿಕೊಂಡಿದ್ದೇವೆ ಎಂದರು